ಹರಿಯಾಣ : ಲಖನ್ ಮಜ್ರಾ ಗ್ರಾಮದ ಆಟದ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ 16 ವರ್ಷದ ಹಾರ್ದಿಕ್ ಎಂಬ ಬಾಸ್ಕೆಟ್‌ಬಾಲ್ ಆಟಗಾರ ಮೃತಪಟ್ಟಿದ್ದಾನೆ. ಬಾಸ್ಕೆಟ್‌ಬಾಲ್‌ನ ಕಬ್ಬಿಣದ ಕಂಬದಲ್ಲಿ ನೇತಾಡುತ್ತಾ ವ್ಯಾಯಾಮ ಮಾಡಲು ಮುಂದಾದಾಗ ಕಂಬ ಮುರಿದು ಏಕಾಏಕಿ ಆತನ ಎದೆಯ ಮೇಲೆ ಬಿದ್ದಿದೆ.
ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಇತರ ಆಟಗಾರರು ಇದನ್ನು ನೋಡಿ ತಕ್ಷಣ ಅವನನ್ನು ಎತ್ತಿಕೊಳ್ಳಲು ಧಾವಿಸಿದ್ದರು, ಆದರೆ ಅಷ್ಟರಲ್ಲಾಗಲೇ ಕಂಬದ ಭಾರದಿಂದಾಗಿ ಹಾರ್ದಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಹಾರ್ದಿಕ್ ನೆಲದ ಮೇಲೆ ಅಭ್ಯಾಸದ ಸಮಯದಲ್ಲಿ ತುಂಬಾ ಸಕ್ರಿಯನಾಗಿ ಕಾಣಿಸಿಕೊಂಡಿದ್ದನ್ನು ತೋರಿಸುತ್ತದೆ. ಬಾಲಕ ಬಾಸ್ಕೆಟ್ ಬಾಲ್ ಕಂಬಕ್ಕೆ ನೇತಾಡುತ್ತಿದ್ದನು. ಹಾರ್ದಿಕ್ ಮೊದಲ ಬಾರಿಗೆ ನೇತಾಡಿದಾಗ, ಕಂಬಕ್ಕೆ ಏನೂ ಆಗಿರಲಿಲ್ಲ. ಆದರೆ ಎರಡನೇ ಬಾರಿ ನೇತಾಡಲು ಪ್ರಯತ್ನಿಸಿದಾಗ ಆತನ ಮೇಲೆ ಇದ್ದಕ್ಕಿದ್ದಂತೆ ಕಂಬ ಆತನ ಮೇಲೆ ಉರುಳಿದೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದ ಯುವ ಆಟಗಾರ :
ಹಾರ್ದಿಕ್ ಒಬ್ಬ ಅತ್ಯುತ್ತಮ ಬ್ಯಾಸ್ಕೆಟ್‌ಬಾಲ್ ಪಟು ಎಂದು ಗ್ರಾಮಸ್ಥರು ಹೇಳಿದ್ದಾರೆ. ಹಾರ್ದಿಕ್ ನನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಭಾರತೀಯ ತಂಡದ ಶಿಬಿರದಿಂದ ಹಿಂತಿರುಗಿದ ಬಳಿಕ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದ್ದ. ಮೃತ ಬಾಸ್ಕೆಟ್ ಬಾಲ್ ಪಟುವಿಗೆ ಕಿರಿಯ ಸಹೋದರ ಕೂಡಾ ಇದ್ದಾನೆ, ಅವನೂ ಕೂಡ ಉತ್ತಮ ಬ್ಯಾಸ್ಕೆಟ್‌ಬಾಲ್ ಆಟಗಾರ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು:
ಆಟಗಾರರು ಪ್ರತಿದಿನ ಬಾಸ್ಕೆಟ್‌ಬಾಲ್ ಕಂಬಕ್ಕೆ ಜೋತು ಬಿದ್ದು ಅಭ್ಯಾಸ ಮಾಡುತ್ತಾರೆ. ಮಂಗಳವಾರ ಬೆಳಗ್ಗೆ, ಇತರ ಹಲವಾರು ಆಟಗಾರರು ಕಂಬಕ್ಕೆ ನೇತಾಡುತ್ತಿದ್ದರು. ಆದರೆ, ಹಾರ್ದಿಕ್ ಮೇಲೆ ಕಂಬ ಬಿದ್ದಿದೆ. ಮಾಹಿತಿ ಬಂದ ತಕ್ಷಣ ನಾವು ಸ್ಥಳಕ್ಕೆ ತಲುಪಿ ಶವವನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದೇವೆ ಎಂದು ಲಖನ್ ಮಜ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಮರ್‌ಜೀತ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದಿಂದ ನೆರವೇರಿದ ಚಂಪಾಷಷ್ಠಿ ಮಹಾರಥೋತ್ಸವ



















