ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪುನಾರಚನೆ ಪ್ರಕ್ರಿಯೆಯ ಭಾಗವಾಗಿ, ನಾಸಾದ ಅತಿದೊಡ್ಡ ‘ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್’ನ ಗ್ರಂಥಾಲಯವನ್ನು ಜನವರಿ 2 ರಂದು (ಶುಕ್ರವಾರ) ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಇಲ್ಲಿರುವ ಲಕ್ಷಾಂತರ ಪುಸ್ತಕಗಳನ್ನು ಕೆಲವನ್ನು ಗೋದಾಮಿಗೆ ಸ್ಥಳಾಂತರಿಸಿದರೆ, ಉಳಿದವುಗಳನ್ನು ಬಿಸಾಕಲು ನಿರ್ಧರಿಸಲಾಗಿದೆ.
ಮೇರಿಲ್ಯಾಂಡ್ನ ಗ್ರೀನ್ಬೆಲ್ಟ್ನಲ್ಲಿರುವ ಈ ಗ್ರಂಥಾಲಯವು 1959ರಿಂದ ಜಾಗತಿಕ ಬಾಹ್ಯಾಕಾಶ ಸಂಸ್ಥೆಗೆ ಪ್ರಮುಖ ಸಂಶೋಧನಾ ಕೇಂದ್ರವಾಗಿತ್ತು. ಹಬಲ್ ಸ್ಪೇಸ್ ಟೆಲಿಸ್ಕೋಪ್ ಮತ್ತು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ನಂತಹ ಪ್ರಮುಖ ಯೋಜನೆಗಳ ಅಭಿವೃದ್ಧಿಯಲ್ಲಿ ಈ ಗ್ರಂಥಾಲಯ ಮಹತ್ವದ ಪಾತ್ರ ವಹಿಸಿತ್ತು.

ಪುಸ್ತಕಗಳು, ಉಪಕರಣಗಳ ಗತಿ ಏನು?
ಸುಮಾರು 1 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿರುವ ಈ ಗ್ರಂಥಾಲಯವನ್ನು ಮುಚ್ಚಿದ ನಂತರ, ಮುಂದಿನ ಎರಡು ತಿಂಗಳ ಕಾಲ ಪುಸ್ತಕಗಳ ಪರಿಶೀಲನೆ ನಡೆಯಲಿದೆ. ನಾಸಾ ವಕ್ತಾರ ಜೇಕಬ್ ರಿಚ್ಮಂಡ್ ಪ್ರಕಾರ, ಕೆಲವು ಪ್ರಮುಖ ದಾಖಲೆಗಳನ್ನು ಸರ್ಕಾರಿ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಉಳಿದ ಪುಸ್ತಕಗಳು ಮತ್ತು ದಾಖಲೆಗಳನ್ನು ವಿಲೇವಾರಿ ಮಾಡಲಾಗುತ್ತದೆ.
ಈಗಾಗಲೇ ಬಾಹ್ಯಾಕಾಶ ನೌಕೆಗಳ ಪರೀಕ್ಷೆಗೆ ಬಳಸಲಾಗುತ್ತಿದ್ದ ಎಲೆಕ್ಟ್ರಾನಿಕ್ಸ್ ಮತ್ತು ವಿಶೇಷ ಉಪಕರಣಗಳನ್ನು ತೆಗೆದುಹಾಕಲಾಗಿದೆ ಎಂದು ಗೊಡ್ಡಾರ್ಡ್ ಎಂಜಿನಿಯರ್ಸ್ ಮತ್ತು ಸೈಂಟಿಸ್ಟ್ಸ್ ಅಸೋಸಿಯೇಷನ್ ತಿಳಿಸಿದೆ.
ಟ್ರಂಪ್ ಆಡಳಿತದ ನಿರ್ಧಾರಕ್ಕೆ ವಿರೋಧ
ಟ್ರಂಪ್ ಆಡಳಿತದ ಈ ನಡೆಯನ್ನು ಮೇರಿಲ್ಯಾಂಡ್ನ ಡೆಮಾಕ್ರಟಿಕ್ ಸೆನೆಟರ್ ಕ್ರಿಸ್ ವ್ಯಾನ್ ಹ್ಯೋಲೆನ್ ತೀವ್ರವಾಗಿ ಖಂಡಿಸಿದ್ದಾರೆ. “ಟ್ರಂಪ್ ಆಡಳಿತವು ಕಳೆದ ಒಂದು ವರ್ಷದಿಂದ ನಾಸಾ ಗೊಡ್ಡಾರ್ಡ್ ಮತ್ತು ಅದರ ಉದ್ಯೋಗಿಗಳ ಮೇಲೆ ದಾಳಿ ನಡೆಸುತ್ತಿದೆ. ಬಾಹ್ಯಾಕಾಶ ಪರಿಶೋಧನೆ ಮತ್ತು ಭೂಮಿಯ ಬಗೆಗಿನ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 2026 ರೊಳಗೆ 100 ಲ್ಯಾಬ್ಗಳು ಬಂದ್
ಆಡಳಿತಾತ್ಮಕ ಪುನರ್ರಚನೆಯ ಭಾಗವಾಗಿ, ಮಾರ್ಚ್ 2026ರ ವೇಳೆಗೆ 1.270 ಎಕರೆ ವಿಸ್ತೀರ್ಣದ ಕ್ಯಾಂಪಸ್ನಲ್ಲಿರುವ 13 ಕಟ್ಟಡಗಳು ಮತ್ತು 100ಕ್ಕೂ ಹೆಚ್ಚು ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಯೋಗಾಲಯಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. 2022ರಿಂದ ಅಮೆರಿಕದಲ್ಲಿ ನಾಸಾದ 7 ಗ್ರಂಥಾಲಯಗಳನ್ನು ಈಗಾಗಲೇ ಮುಚ್ಚಲಾಗಿದ್ದು, 2025ರಲ್ಲಿ ಇನ್ನೂ 3 ಗ್ರಂಥಾಲಯಗಳನ್ನು ಮುಚ್ಚಲಾಗಿದೆ.
ಗ್ರಂಥಾಲಯ ಮುಚ್ಚಿದ ನಂತರ, ಸಂಶೋಧಕರು ‘ಆಸ್ಕ್ ಎ ಲೈಬ್ರರಿಯನ್’ ಎಂಬ ಡಿಜಿಟಲ್ ಸೇವೆಯನ್ನು ಬಳಸಬೇಕಾಗುತ್ತದೆ ಎಂದು ನಾಸಾ ತಿಳಿಸಿದೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟಕ್ಕೆ ನಲುಗಿದ ಇರಾನ್ | ‘ಸರ್ವಾಧಿಕಾರಿ’ ಖಮೇನಿ ವಿರುದ್ಧದ ಪ್ರತಿಭಟನೆಯಲ್ಲಿ 7 ಸಾವು!



















