ನವದೆಹಲಿ: ಅಮೆರಿಕದ ಎಐ ಸಂಶೋಧಕ, ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ ಮ್ಯಾನ್ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ಮೂರು ಗಂಟೆಗಳವರೆಗೆ ಮಾತುಕತೆ ನಡೆಸಿದ್ದಾರೆ. ಇವರು ಮಾತುಕತೆ ನಡೆಸಿದ ಪಾಡ್ ಕಾಸ್ಟ್ ಈಗ ಬಿಡುಗಡೆಯಾಗಿದೆ. ನರೇಂದ್ರ ಮೋದಿ ಅವರು ಭಾರತದ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಅದರಲ್ಲೂ, ಮಹಾತ್ಮ ಗಾಂಧೀಜಿ, ಗೌತಮ ಬುದ್ಧ, ಸ್ವಾಮಿ ವಿವೇಕಾನಂದ ಸೇರಿ ಹತ್ತಾರು ಮಹನೀಯರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ವೇಳೆ ದೇಶದ ಜನರನ್ನು ಹೇಗೆ ಸಂಘಟಿಸಿದರು, ಆರೆಸ್ಸೆಸ್ ತಮ್ಮ ಮೇಲೆ ಬೀರಿದ ಪ್ರಭಾವ ಎಂಥಾದ್ದು, ಸ್ವಾಮಿ ವಿವೇಕಾನಂದ ವಿಚಾರಗಳು ಹೇಗೆ ಪರಿಣಾಮ ಬೀರಿವೆ ಎಂಬುದು ಸೇರಿ ಹಲವು ವಿಷಯಗಳ ಕುರಿತು ಮೋದಿ ಮಾತನಾಡಿದ್ದಾರೆ.
ಮೋದಿ ಮಾತಿನ ಪ್ರಮುಖಾಂಶಗಳು
- ಶಾಂತಿಯ ಕುರಿತು ಭಾರತ ಮಾತನಾಡಿದರೆ ಜಗತ್ತೇ ಕಿವಿಯಾಗುತ್ತದೆ. ಏಕೆಂದರೆ, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ ಜನಿಸಿದ ನೆಲ ನಮ್ಮದು.
- ಗಾಂಧೀಜಿಯವರು ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಅದನ್ನು ಜನಾಂದೋಲನವನ್ನಾಗಿ ಮಾಡಿದರು.
- ನರೇಂದ್ರ ಮೋದಿ ಹೆಸರಲ್ಲಿ ಯಾವುದೇ ಶಕ್ತಿ ಇಲ್ಲ. ದೇಶದ 140 ಕೋಟಿ ಜನ ನನ್ನೊಂದಿಗೆ ಇದ್ದಾರೆ ಎಂಬುದೇ ನನ್ನ ಶಕ್ತಿ
- ನನಗೆ ಸ್ವಾಮಿ ವಿವೇಕಾನಂದರು ತುಂಬ ಆದರ್ಶ. ಯಾವುದೇ ಸ್ವಾರ್ಥವಿಲ್ಲದೆ ಜನರ ಸೇವೆ ಮಾಡಬೇಕು ಎಂಬುದನ್ನು ಅವರ ವಿಚಾರಧಾರೆಗಳಿಂದ ಕಲಿತೆ.
- ನನ್ನ ಜೀವನಕ್ಕೆ ಗುರಿ ಕಲ್ಪಿಸಿದ್ದು, ಜನರ ಸೇವೆ ಮಾಡಬೇಕು ಎಂಬ ಮನೋಭಾವ ಮೂಡಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ.
- ಪಾಕಿಸ್ತಾನದಲ್ಲಿ ಉಗ್ರವಾದವು ಬೇರು ಬಿಟ್ಟಿದೆ. ಇದಕ್ಕೆ ಮುಗ್ಧರು, ಮಕ್ಕಳು ಬಲಿಯಾಗುತ್ತಿದ್ದಾರೆ. ಉಗ್ರವಾದ ಬಿಡದ ಹೊರತು ಪಾಕಿಸ್ತಾನ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.
- ರಷ್ಯಾ ಹಾಗೂ ಉಕ್ರೇನ್ ಜತೆಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ಇದು ಯುದ್ಧಕ್ಕೆ ಸಕಾಲವಲ್ಲ, ಶಾಂತಿ ನೆಲೆಸಲಿ ಎಂಬುದಾಗಿ ಇಬ್ಬರಿಗೂ ಹೇಳಿದ್ದೇನೆ.