ಉಡುಪಿ : ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಿ ಪಾಳುಬಿದ್ದ ಸ್ಥಳದಲ್ಲಿ ಹಾಕಿರುವ ಬಗ್ಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಬನ್ನಂಜೆ ವೃತ್ತದಲ್ಲಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಕಿತ್ತು ಬಿಸಾಕಿ, ಉಡುಪಿ ನಗರ ಸಂಚಾರಿ ಠಾಣೆಯ ಪಾಲುಬಿದ್ದ ಜಾಗದ ಪೊದೆಗಳ ಮಧ್ಯೆ ಎಸೆಯಲಾಗಿದೆ. ಶ್ರೀನಾರಾಯಣ ಗುರುಗಳ ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ವೃತ್ತವನ್ನು ರಚಿಸಲಾಗಿದೆ. ಇದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ತೋರಿದ ದೊಡ್ಡ ಅಗೌರವ ಎಂದು ಇದನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ತೀವ್ರವಾಗಿ ಖಂಡಿಸಿದೆ.
ಸ್ಥಳೀಯ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತು ಸ್ಪಷ್ಟನೆಯನ್ನು ಕೊಡಬೇಕು. ಇಲ್ಲದಿದ್ದಲ್ಲಿ ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಮುಂದಿನ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.