ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ, ಹೊಸ ಮೆಟ್ರೋ ಮಾರ್ಗಕ್ಕೆ ಶಂಕು ಸ್ಥಾಪನೆ ಹಾಗೂ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಮೆಜೆಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಕೆಲಕ್ಷಣದಲ್ಲಿ ಮೋದಿ ತಲುಪಲಿದ್ದಾರೆ. ಬಳಿಕ ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ಮಾಡಲಿದ್ದಾರೆ.
ನಂತರ ಅಮೃತಸರ-ಶ್ರೀ ಮಾತಾ ವೈಷ್ಣೋದೇವಿ ಕತ್ರಿ ಮತ್ತು ಅಜ್ನಿ (ನಾಗ್ಪುರ)-ಪುಣೆ ನಡುವಿನ ಇನ್ನೂ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ವರ್ಚುವಲ್ ಮೂಲಕ ಇಲ್ಲಿಂದಲೇ ನಮೋ ಹಸಿರು ನಿಶಾನೆ ತೋರಲಿದ್ದಾರೆ.
ಬಳಿಕ ಹಳದಿ ಮಾರ್ಗದಲ್ಲಿರುವ ಆರ್‌ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ.
11:45 ರಿಂದ 12:50 ರ ನಡುವೆ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿ, ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಕ್ಕೆ ಮೆಟ್ರೋ ಮೂಲಕ ಸಂಚರಿಸಲಿದ್ದಾರೆ.
ಅಲ್ಲಿಂದ ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಬೆಂಗಳೂರು ಮೆಟ್ರೋ ಹಂತ-3ಕ್ಕೆ ಅಡಿಪಾಯ ಹಾಕಲಿದ್ದಾರೆ. ಬಳಿಕ ಆರ್‌ವಿ ರಸ್ತೆ (ರಾಗಿಗುಡ್ಡ)ಯಿಂದ ಬೊಮ್ಮಸಂದ್ರ ನಿಲ್ದಾಣದವರೆಗಿನ ಹಳದಿ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ನಂತರ ಹೆಲಿಕಾಪ್ಟರ್‌ನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ ಮಧ್ಯಾಹ್ನ 2.45 ಕ್ಕೆ ದೆಹಲಿಗೆ ಹಿಂತಿರುಗಲಿದ್ದಾರೆ.


















