’75 ವರ್ಷ ತುಂಬಿದೆ ಎಂದು ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿಯ ಪಾಪಿಗಳು ಈಗ ಪ್ರಧಾನಮಂತ್ರಿ ಸ್ಥಾನದ ವಿಚಾರದಲ್ಲೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಆಶಯದಂತೆ ನಡೆದುಕೊಳ್ಳಲಿ’ ಎಂದು ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂಬ ಮೋಹನ್ ಭಾಗವತ್ ಅವರ ನಿಲುವನ್ನು ಸ್ವಾಗತಿಸುತ್ತೇನೆ’ ಎಂದರು.
‘ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗೆ ಇಳಿದರೆ ಅವರ ಸ್ಥಾನಕ್ಕೆ ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಕ್ತ ಆಯ್ಕೆ. ಗಡ್ಕರಿ ಅವರಿಗೆ ದೇಶದ ಜನಸಾಮಾನ್ಯರ ಬಗ್ಗೆ ಹೆಚ್ಚು ಕಾಳಜಿ ಇದೆ. ‘ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ದೇಶದ ಸಂಪತ್ತು ಕೆಲವೇ ಜನರ ಪಾಲಾಗುತ್ತಿದೆ’ ಎಂದು ಗಡ್ಕರಿ ಈಚೆಗೆ ನೀಡಿದ್ದ ಹೇಳಿಕೆಯೇ ಇದಕ್ಕೆ ಸಾಕ್ಷಿ.
ಪ್ರಧಾನಮಂತ್ರಿ ಸ್ಥಾನಕ್ಕೆ ಅವರೇ ಅರ್ಹರು, ಆ. ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಚಿಂತಿಸಲಿ’ ಎಂದು ಸಲಹೆ ನೀಡಿದರು.
”ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಸಮಾರಂಭಕ್ಕೆ ಕ್ಷೇತ್ರದ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರನ್ನು ಆಹ್ವಾನಿಸದೇ ಅಪಮಾನ ಮಾಡಲಾಗಿದೆ. ಆದರೂ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುವೆ’ ಎಂದರು.