ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಾನೂನು ಸಮರ ಆರಂಭಿಸಿದ್ದಾರೆ.
ದರ ಏರಿಕೆ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ತೇಜಸ್ವಿ ಸೂರ್ಯ ಅವರು ಕೋರ್ಟ್ ಮೊರೆ ಹೋಗಿದ್ದು, ತಮ್ಮ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗಿದೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಕ್ರಮವನ್ನು ಅಪಾರದರ್ಶಕ ಎಂದು ಕರೆದಿರುವ ತೇಜಸ್ವಿ ಸೂರ್ಯ, ಮೆಟ್ರೋ ಶುಲ್ಕ ಸಮಿತಿ ವರದಿಯನ್ನೇಕೆ ಗೌಪ್ಯವಾಗಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ತೆರಿಗೆದಾರರಿಂದ ಹಣಕಾಸು ನೆರವು ಪಡೆದು ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದಿರಿ. ಆದರೆ, ಅಧ್ಯಯನದ ವರದಿಯನ್ನು ಬಹಿರಂಗಪಡಿಸುತ್ತಿಲ್ಲ. ದೆಹಲಿ ಸೇರಿದಂತೆ ದೇಶದ ಇತರ ಎಲ್ಲಾ ಮೆಟ್ರೋ ವ್ಯವಸ್ಥೆಗಳನ್ನು ಹೊಂದಿರುವ ನಗರಗಳೂ ಎಫ್‌ಎಫ್‌ಸಿ ವರದಿಗಳನ್ನು ಸಾರ್ವಜನಿಕಗೊಳಿಸಿವೆ. ಬೆಂಗಳೂರಿನಲ್ಲೇಕೆ ಬಿಡುಗಡೆ ಮಾಡುತ್ತಿಲ್ಲ? ಸರ್ಕಾರ ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ? ಎಂದು ಪ್ರಶ್ನಿಸಿದ್ದಾರೆ.