ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಕಳೆದ ಶನಿವಾರವೂ ಮೆಟ್ರೋ ಟ್ರ್ಯಾಕ್‌ಗೆ ಹಾರಿ ವ್ಯಕ್ತಿಯೊಬ್ಬ ಸುಸೈಡ್‌ಗೆ ಯತ್ನಿಸಿರುವ ಘಟನೆ ನಡೆದಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ ನಮ್ಮ ಮೆಟ್ರೋ ನಿಲ್ದಾಣ ಆತ್ಮಹತ್ಯೆಗೆ ಹಾಟ್‌ಸ್ಪಾಟ್ ಆಯ್ತಾ ಎಂಬ ಅನುಮಾನಗಳು ಶುರುವಾಗಿದೆ.
ವರ್ಷದಲ್ಲಿ ಸುಮಾರು 5ರಿಂದ 6 ಜನ ಮೆಟ್ರೋ ಸ್ಟೇಷನ್ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಇಷ್ಟಾದರೂ ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲದಂತಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ನಮ್ಮ ಮೆಟ್ರೋ ಅಧಿಕಾರಿಗಳೇ ಇದಕ್ಕೆಲ್ಲ ಹೊಣೆ. ಇದೀಗ ಇಷ್ಟೆಲ್ಲ ಘಟನೆಯ ಬಳಿಕವೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಆಕ್ರೋಶ ಭುಗಿಲೆದ್ದಿದ್ದು, ನಮ್ಮಲ್ಲಿಯೂ ಇತರೆ ದೇಶಗಳಂತೆ ಸುರಕ್ಷತೆ ವ್ಯವಸ್ಥೆ ಮಾಡುವಂತೆ ಜನ ಆಗ್ರಹಿಸುತ್ತಿದ್ದಾರೆ.
ಇಂತಹ ಘಟನೆಗಳಿಂದ ಪ್ರಯಾಣಿಕರಿಗೂ ಸಮಸ್ಯೆಗಳು ಹೆಚ್ಚಾಗಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಲೇ ಬೇಕಾಗಿದೆ. ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಪಿಎಸ್‌ಡಿ ಡೋರ್ ಅಳವಡಿಸಲಾಗಿದೆ. ಆದರೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮಾತ್ರ ಇನ್ನೂ ಪಿಎಸ್‌ಡಿ ಅಳವಡಿಸಿಲ್ಲ. ಮೆಟ್ರೋ ಆರಂಭವಾಗಿ ಹದಿಮೂರು ವರ್ಷಗಳು ಕಳೆದಿವೆ ಆದರೂ ಟ್ರ್ಯಾಕ್‌ಗೆ ಯಾವುದೇ ಭದ್ರತೆ ಇಲ್ಲ. ಕಳೆದ ವರ್ಷದ ಆರಂಭದಿಂದ ಮೆಟ್ರೋ ಜಿಗಿಯುವವರ ಸಂಖ್ಯೆ ಡಬಲ್ ಆಗಿದೆ. ಎಷ್ಟೇ ಜಾಗೃತಿ ವಹಿಸಿದರೂ ಸುಸೈಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಪ್ರಯಾಣಿಕ ಆಕ್ರೋಶ ಹೊಹಾಕುತ್ತಿದ್ದಾರೆ.