ಚಿತ್ರದುರ್ಗ: ಹತ್ಯೆಯಾಗಿರುವ ರೇಣುಕಸ್ವಾಮಿ ಪುತ್ರನ ನಾಮಕರಣ ಶಾಸ್ತ್ರ ನಡೆಯುತ್ತಿದ್ದು, ಮಗು ಹುಟ್ಟಿ ಬರುತ್ತಿದ್ದಂತೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದರೂ ರೇಣುಕಾಸ್ವಾಮಿ ಕೊಲೆಯ ನೆನಪು ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿದೆ.
ಮಗುವಿನ ತೊಟ್ಟಿಲ ಶಾಸ್ತ್ರದ ವೇಳೆ ಮಗನನ್ನು ನೆನೆದು ರೇಣುಕಾಸ್ವಾಮಿ ತಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಣ್ಣನನ್ನು ನೆನೆದು ಪೂಜೆ ಮಾಡುವಾಗಲೇ ಸ್ವಾಮಿ ತಂಗಿ ಸುಚೇತ ಕಣ್ಣೀರು ಸುರಿಸಿದ್ದಾರೆ. ರೇಣುಕಸ್ವಾಮಿ ಹತ್ಯೆ ನೆನೆದು ಕಣ್ಣೀರಿಡುತ್ತಲೇ ಕುಟುಂಬಸ್ಥರು ತೊಟ್ಟಿಲು ಶಾಸ್ತ್ರದ ಪೂಜೆ ನೆರವೇರಿಸಿದ್ದಾರೆ.
ಸ್ವಾಮಿ ಪೋಷಕರ ಕಣ್ಣೀರು ಕಂಡು ಸ್ವಾಮಿ ಪತ್ನಿ ಸಹನಾ ಕೂಡ ಭಾವುಕರಾಗಿದ್ದಾರೆ. ಮಗನಿಗೆ ಮೊದಲು ಹೆಸರಿಡಬೇಕಾಗಿದ್ದ ರೇಣುಕಸ್ವಾಮಿ ಇಲ್ಲದ್ದನ್ನ ನೆನೆದು ಕಣ್ಣೀರು ಸುರಿಸಿದ್ದಾರೆ. ರೇಣುಕಸ್ವಾಮಿ ತಂದೆ ಶಿವನಗೌಡ್ರು, ತಾಯಿ ರತ್ನಪ್ರಭ, ತಂಗಿ ಸುಚೇತ ಸೇರಿ ಕುಟುಂಬದ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರೇಣುಕಸ್ವಾಮಿ ಪುತ್ರನಿಗೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ಸ್ವಾಮಿ ತಂಗಿ ಸುಚೇತರಿಂದ ಸ್ವಾಮಿ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಮಗುವಿನ ಕಿವಿಯಲ್ಲಿ ಶಶಿಧರಸ್ವಾಮಿ ಎಂದು ಹೇಳಿ ಹೆಸರಿಡಲಾಗಿದೆ.