ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿರುವ ‘ಹೈದರಾಬಾದ್ ಎಕ್ಸ್ಪ್ರೆಸ್’ ಮೊಹಮ್ಮದ್ ಸಿರಾಜ್ ಅವರ ಯಶಸ್ಸಿನ ಹಿಂದಿನ ‘ರೆಸಿಪಿ’ಯನ್ನು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಬಹಿರಂಗಪಡಿಸಿದ್ದಾರೆ. ಸಿರಾಜ್ ಅವರ ಅದ್ಭುತ ಫಿಟ್ನೆಸ್ ಮತ್ತು ಬೌಲಿಂಗ್ ಸಾಮರ್ಥ್ಯಕ್ಕೆ ಅವರ ನೆಚ್ಚಿನ ಆಹಾರವಾದ ‘ಮಟನ್ ನಲ್ಲಿಮೂಳೆಯ ಬಿರಿಯಾನಿ’ ಮತ್ತು ‘ಪಾಯಾ’ ಕಾರಣ ಎಂದು ಅಜರುದ್ದೀನ್ ಹೇಳಿದ್ದಾರೆ.
ಸರಣಿಯದ್ದಕ್ಕೂ ಸಿರಾಜ್ ಅವರ ಪ್ರಭಾವಶಾಲಿ ಪ್ರದರ್ಶನ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯುದ್ದಕ್ಕೂ, ಭಾರತದ ಪ್ರಮುಖ ವೇಗದ ಬೌಲರ್ ಆಗಿ ಜವಾಬ್ದಾರಿ ಹೊತ್ತಿದ್ದ ಸಿರಾಜ್, ಸರಣಿಯಲ್ಲಿ ಅತಿ ಹೆಚ್ಚು ಓವರ್ಗಳನ್ನು ಬೌಲ್ ಮಾಡಿದ್ದಲ್ಲದೆ, ಎಲ್ಲಾ ಪಂದ್ಯಗಳಲ್ಲೂ ಆಡಿದ ಕೇವಲ ಇಬ್ಬರು ವೇಗಿಗಳಲ್ಲಿ ಒಬ್ಬರಾಗಿದ್ದರು. ಜಸ್ಪ್ರೀತ್ ಬುಮ್ರಾ ಕೇವಲ ಮೂರು ಟೆಸ್ಟ್ಗಳನ್ನು ಆಡಿದರೆ, ಇತರ ವೇಗಿಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ, ಈ ಒತ್ತಡದ ನಡುವೆಯೂ ಸಿರಾಜ್ ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದನ್ನು ನೀಡಿದರು. ನಿರ್ಣಾಯಕ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದು ಭಾರತವು ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು.
ಸಿರಾಜ್ ಅವರ ಬಲಿಷ್ಠ ದೇಹದ ರಹಸ್ಯ ಬಿಚ್ಚಿಟ್ಟ ಅಜರುದ್ದೀನ್
ಸಿರಾಜ್ ಅವರ ತವರು ರಾಜ್ಯದವರೇ ಆದ ಮೊಹಮ್ಮದ್ ಅಜರುದ್ದೀನ್, ಈ ಯುವ ವೇಗಿಯ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿರಾಜ್ ಅವರ ಅದ್ಭುತ ಚೇತರಿಕೆ ಮತ್ತು ಬಲಿಷ್ಠ ದೇಹಕ್ಕೆ ಅವರ ‘ರೆಡ್ ಮೀಟ್’ (ಕೆಂಪು ಮಾಂಸ) ಆಹಾರ ಪದ್ಧತಿಯೇ ಕಾರಣ ಎಂದು ಅವರು ನಂಬುತ್ತಾರೆ.
“ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ ನೆಚ್ಚಿನ ಆಹಾರವಾದ ಮಟನ್ ನಲ್ಲಿ ಮೂಳೆಯ ಬಿರಿಯಾನಿ ಮತ್ತು ಪಾಯಾ ಸೇವನೆಯಿಂದಾಗಿ ಅವರು ಬಲಿಷ್ಠವಾದ ದೇಹವನ್ನು, ವಿಶೇಷವಾಗಿ ಕಾಲುಗಳನ್ನು ಹೊಂದಿದ್ದಾರೆ. ಸರಣಿಯುದ್ದಕ್ಕೂ ಅವರು ತೋರಿದ ಉತ್ಸಾಹ ಮತ್ತು ಶಕ್ತಿ ಅದ್ಭುತವಾಗಿತ್ತು. ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡಬೇಕೆಂಬ ಹಸಿವು ಅವರಲ್ಲಿತ್ತು,” ಎಂದು ಅಜರುದ್ದೀನ್ ‘ಮಿಡ್-ಡೇ’ ಪತ್ರಿಕೆಗೆ ತಿಳಿಸಿದ್ದಾರೆ.
ಆಹಾರ ಪದ್ಧತಿ ಮತ್ತು ಕ್ರೀಡಾಪಟುಗಳ ಫಿಟ್ನೆಸ್
ಆಧುನಿಕ ಕ್ರಿಕೆಟ್ನಲ್ಲಿ ಆಟಗಾರರು ತಮ್ಮ ಆಹಾರದ ಬಗ್ಗೆ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆಯಾದರೂ, ವೇಗದ ಬೌಲರ್ಗಳಿಗೆ ಬಿರಿಯಾನಿ ಪ್ರೀತಿ ಹೊಸದೇನಲ್ಲ. ಈ ಹಿಂದೆ, ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಮತ್ತು ಸಹ ಆಟಗಾರ ಇಶಾಂತ್ ಶರ್ಮಾ ಅವರು, ಮತ್ತೋರ್ವ ವೇಗಿ ಮೊಹಮ್ಮದ್ ಶಮಿ ಅವರ ಬಿರಿಯಾನಿ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ವಿರಾಟ್ ಕೊಹ್ಲಿಯಂತಹ ಆಟಗಾರರು ಸಸ್ಯಾಹಾರಕ್ಕೆ ಮರಳಿದ್ದರೂ, ಭಾರತ ತಂಡದ ಬಹುತೇಕ ಆಟಗಾರರು ತಮ್ಮ ಪೋಷಣೆಗಾಗಿ ಮಾಂಸಹಾರವನ್ನೇ ಅವಲಂಬಿಸಿದ್ದಾರೆ.
ಮಟನ್ ನಲ್ಲಿ ಮೂಳೆಯ ಬಿರಿಯಾನಿಯು ಉತ್ತಮ ಗುಣಮಟ್ಟದ ಪ್ರೊಟೀನ್ಮ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ‘ಕೊಲ್ಯಾಜೆನ್’ ಎಂಬ ಅಂಶವು ಕೀಲುಗಳು ಮತ್ತು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತದೆ, ಇದು ಕ್ರೀಡಾಪಟುಗಳಿಗೆ ಅತ್ಯಗತ್ಯ. ಹಾಗೆಯೇ, ‘ಪಾಯಾ’ (ಮೇಕೆಯ ಕಾಳಿನ ಸೂಪ್) ಸ್ನಾಯುಗಳ ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹದ ಚಲನಶೀಲತೆಯನ್ನು ಹೆಚ್ಚಿಸಲು ನೆರವಾಗುತ್ತದೆ.
‘ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ’ಯ ಸರಣಿಯಲ್ಲಿ ಸಿರಾಜ್ ಬರೋಬ್ಬರಿ 185.3 ಓವರ್ಗಳನ್ನು ಬೌಲ್ ಮಾಡಿದ್ದರು. ಇದು ಐಪಿಎಲ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 150ಕ್ಕೂ ಹೆಚ್ಚು ಓವರ್ಗಳನ್ನು ಬೌಲ್ ಮಾಡಿದ ನಂತರದ ಅವರ ಕಾರ್ಯಭಾರವಾಗಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅವರು ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಒಂದು ವೇಳೆ ಈ ಅದ್ಭುತ ಪ್ರದರ್ಶನದ ಹಿಂದಿನ ಇಂಧನ ಬಿರಿಯಾನಿಯೇ ಆಗಿದ್ದರೆ, ಅದರಿಂದ ತಂಡಕ್ಕೆ ಲಾಭವೇ ಆಗಿದೆ ಎನ್ನಬಹುದು.



















