ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ನಡೆದ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ರ‍್ಯಾಪರ್ ಕೆನ್ಯೆ ವೆಸ್ಟ್ ಮತ್ತು ಅವರ ಪತ್ನಿ, ಮಾಡೆಲ್ ಬಿಯಾಂಕಾ ಸೆನ್ಸರಿ ಅವರನ್ನು ಕಾರ್ಯಕ್ರಮದಿಂದಲೇ ಹೊರದಬ್ಬಲಾಗಿದೆ. ಇದಕ್ಕೆ ಕಾರಣ ಬಿಯಾಂಕಾ ಅವರು ಧರಿಸಿದ್ದ “ಬೆತ್ತಲೆ” ವಸ್ತ್ರ!
ರ‍್ಯಾಪರ್ ಕೆನ್ಯೆ ವೆಸ್ಟ್ ಅವರನ್ನು ‘ಕಾರ್ನಿವಾಲ್’ ಹಾಡಿಗಾಗಿ ಬೆಸ್ಟ್ ರ‍್ಯಾಪ್ ಸಾಂಗ್ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿತ್ತು. ಹೀಗಾಗಿ ಅವರು ಪತ್ನಿ ಬಿಯಾಂಕಾ ಜತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಯಾಂಕಾ ಅವರು ಉದ್ದದ ಕಪ್ಪು ಬಣ್ಣದ ಫರ್ ಕೋಟ್ ಅನ್ನು ಧರಿಸಿದ್ದರು. ಅವರಿಬ್ಬರಿಗೂ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಆಹ್ವಾನ ನೀಡಿರಲಿಲ್ಲ. ಹೀಗಿದ್ದರೂ, ಕೆನ್ಯೆ ವೆಸ್ಟ್ ಮತ್ತು ಬಿಯಾಂಕಾ ಏಕಾಏಕಿ ರೆಡ್ ಕಾರ್ಪೆಟ್ ಮೇಲೇರಿದರು.
ವೇದಿಕೆಗೆ ಬರುತ್ತಿದ್ದಂತೆ ಬಿಯಾಂಕಾ ತಾವು ಧರಿಸಿದ್ದ ಲಾಂಗ್ ಫರ್ ಕೋಟ್ ಅನ್ನು ಬಿಚ್ಚಿದರು. ಒಳಗೆ ಸಂಪೂರ್ಣವಾಗಿ ಪಾರದರ್ಶಕವಾದ ದೇಹಕ್ಕೆ ಅಂಟಿಕೊಂಡ ದೇಹದ್ದೇ ಬಣ್ಣದ ಬಿಗಿ ಉಡುಪು ಧರಿಸಿದ್ದರು. ಅದನ್ನು ನೋಡಿದರೆ, ಅವರು ನಿಜಕ್ಕೂ ಉಡುಪು ತೊಟ್ಟಿದ್ದಾರೋ ಇಲ್ಲವೋ ಎಂಬ ಅನುಮಾನ ಮೂಡಿಸುವಂತಿತ್ತು. ಬಿಯಾಂಕಾ ಅವರ ಬೆತ್ತಲೆ” ಪ್ರದರ್ಶನವು ಅಲ್ಲಿ ನೆರೆದಿದ್ದವರೆಲ್ಲರನ್ನೂ ಅಚ್ಚರಿಗೆ ನೂಕಿತು.

ಕೂಡಲೇ ಪತಿ-ಪತ್ನಿ ಇಬ್ಬರನ್ನೂ ಆಯೋಜಕರು ರೆಡ್ ಕಾರ್ಪೆಟ್ ನಿಂದ ಕೆಳಗಿಳಿಸಿ, ಕಾರ್ಯಕ್ರಮದಿಂದಲೇ ಗೇಟ್ ಪಾಸ್ ಕೊಟ್ಟರು. ಕೆನ್ಯೆ ವೆಸ್ಟ್ ಮತ್ತು ಬಿಯಾಂಕಾ ದಂಪತಿಯ ಈ ನಡೆ ಭಾರೀ ಟೀಕೆಗೂ ಕಾರಣವಾಯಿತು.
2015ರಲ್ಲಿ ಕೆನ್ಯೆ ವೆಸ್ಟ್ ಅವರು ತಮ್ಮ ಅಂದಿನ ಪತ್ನಿ, ಮಾಡೆಲ್ ಕಿಮ್ ಕರ್ದಾಶಿಯನ್ ಅವರೊಂದಿಗೆ ಗ್ರ್ಯಾಮಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ್ದರು. ಅಂದೂ ದಂಪತಿ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದರು.
7 ವರ್ಷಗಳ ದಾಂಪತ್ಯ ಜೀವನದ ಬಳಿಕ 2021ರ ಫೆಬ್ರವರಿಯಲ್ಲಿ ಕಿಮ್ ಕರ್ದಾಶಿಯನ್ ಅವರು ಕೆನ್ಯೆ ವೆಸ್ಟ್ ಗೆ ವಿಚ್ಛೇದನ ನೀಡಿದ್ದರು. 2022ರ ಡಿಸೆಂಬರ್ ನಲ್ಲಿ ಕೆನ್ಯೆ ಅವರು ಮತ್ತೊಬ್ಬ ಮಾಡೆಲ್ ಬಿಯಾಂಕಾರನ್ನು ವರಿಸಿದ್ದರು.