ಬೆಂಗಳೂರು: ಇತ್ತೀಚಿಗೆ ಅಮಾನವೀಯ ಘಟನೆಗಳು ಹೆಚ್ಚಾಗುತ್ತಿದ್ದು, ಅಮಾಯಕರು ಭಯದಿಂದಲೇ ಬದುಕು ಸಾಗಿಸುವಂತಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಈಗ ಅಮಾನವೀಯ ಘಟನೆ ನಡೆದಿದೆ. ಸಂಬಳ ಕೊಡುವುದಾಗಿ ಯುವಕನನ್ನು ಕರೆಯಿಸಿಕೊಂಡು ಅಂಗಡಿ ಮಾಲೀಕ ಬೆತ್ತದಿಂದ ಮನಬಂದಂತೆ ಹಲ್ಲೆ (Assault) ನಡೆಸಿ ನಗ್ನಗೊಳಿಸಿ ವಿಡಿಯೋ ಮಾಡಿ ದರ್ಪ ಮೆರೆದಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಸುಬ್ರಮಣ್ಯಪುರದ ಉತ್ತರಹಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಶರೀಫ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಹಾಸಿಗೆ ವ್ಯಾಪಾರಿ ಶೆಕ್ಷಾವಾಲ ಎಂಬ ಅಂಗಡಿ ಮಾಲೀಕ ಸಂಬಳ ಕೇಳಿದಕ್ಕೆ ನಗ್ನಗೊಳಿಸಿ ಹಲ್ಲೆ ನಡೆಸಿರುವ ವ್ಯಕ್ತಿ.
ಹಲ್ಲೆಗೊಳಗಾದ ಶರೀಫ್ ಹಾಗೂ ಶೆಕ್ಷಾವಲ ಇಬ್ಬರು ಸಂಬಂಧಿಕರು. ಹಾಸಿಗೆ ಕೆಲಸಕ್ಕೆ ಬೇಕು ಎಂದು ಶರೀಫ್ ನನ್ನು ಆಂಧ್ರದಿಂದ ಶೆಕ್ಷಾವಲ ಕರೆಸಿಕೊಂಡಿದ್ದ. ನಂತರ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡಿದ್ದ. ಇದರಿಂದ ಬೇಸತ್ತು ಶರೀಫ್ ಕೆಲಸ ಬಿಟ್ಟಿದ್ದ. ಬಾಬು ಎಂಬ ಮತ್ತೋರ್ವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಶೆಕ್ಷಾವಲ ಕೆಲಸ ಬಿಟ್ಟು ಹೋಗಿದಕ್ಕೆ ಬೈದಿದ್ದ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆಗ ಶರೀಫನು ಶೆಕ್ಷಾವಲನ ತಾಯಿ ಬಗ್ಗೆ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡಿದ್ದ ಶೆಕ್ಷಾವಲ ಬಾಕಿ ಸಂಬಳ ಕೊಡುವುದಾಗಿ ಯುವಕನನ್ನು ತನ್ನ ಅಂಗಡಿಗೆ ಕರೆಯಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಅಂಗಡಿಯ ಶೆಟರ್ ಎಳೆದು ಬೆತ್ತದಿಂದ ಮನ ಬಂದಂತೆ ಶರೀಫ್ ಮೇಲೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿ ಶೆಕ್ಷಾವಲ ಅಟ್ಟಹಾಸ ಮೆರೆದಿದ್ದಾನೆ ಎನ್ನಲಾಗಿದೆ. ಇಷ್ಟಾದರೂ ಶರೀಫ್ ಮೇಲೆಯೇ ಶೆಕ್ಷವಾಲ ದೂರು ಸಲ್ಲಿಸಿದ್ದ. ಆನಂತರ ಪೊಲೀಸರು ಕರೆಯಿಸಿ ಬುದ್ಧಿ ಹೇಳಿದ್ದರು. ಆಗ ಶರೀಫ್ ಮರಳಿ ಬೆಂಗಳೂರಿಗೆ ಬರುವುದಿಲ್ಲ ಎಂದು ಹೇಳಿದ್ದ. ಆನಂತರ ಸುಬ್ರಮಣ್ಯಪುರ ಪೊಲೀಸರಿಗೆ ಶರೀಫ್ ಹಲ್ಲೆಯ ವಿಡಿಯೋ ಕೈ ಸೇರಿತ್ತು. ವಿಡಿಯೋ ನೋಡಿದ ಪೊಲೀಸರು ಮತ್ತೆ ಶರೀಫ್ಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಹೇಳಿ, ಶರೀಫ್ ಹತ್ತಿರ ಘಟನೆಯ ವಿವರ ಕೇಳಿದ್ದಾರೆ. ಆಗ ಶರೀಫ್ ನಡೆದ ಸಂಗತಿ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಆತನಿಂದ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.