ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾರ್ಚ್ 17ರಂದು ನಡೆದ ಭಾರಿ ಕೋಮುಗಲಭೆಗೆ (Nagpur Communal Clashes) ಮೈನಾರಿಟೀಸ್ ಡೆಮಾಕ್ರಟಿಕ್ ಪಕ್ಷದ ನಾಯಕ ಫಹೀಂ ಖಾನ್ ಅವರೇ ಮಾಸ್ಟರ್ ಮೈಂಡ್ ಎಂದು ಪೊಲೀಸರು ಮಾಹಿತಿ ನೀಡಿದ್ದು, ನಾಯಕನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಮಾರ್ಚ್ 17ರಂದು ನಾಗ್ಪುರದಲ್ಲಿ ನಡೆದ ಕೋಮುಗಲಭೆಯಲ್ಲಿ ಉದ್ರಿಕ್ತ ಗುಂಪೊಂದು ಭಾರಿ ಗಲಾಟೆ ಮಾಡಿತ್ತು.
ರಸ್ತೆಗಳ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲಾಗಿತ್ತು. ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು. ಈಗ ಕೋಮುಗಲಭೆಗೆ ಫಹೀಂ ಖಾನ್ ರೂವಾರಿ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. 38 ವರ್ಷದ ಫಹೀಂ ಖಾನ್, ಎಂಡಿಪಿ ನಗರ ಘಟಕದ ಅಧ್ಯಕ್ಷರಾಗಿದ್ದಾರೆ. ಇವರು ನಾಗ್ಪುರದ ಯಶೋಧರ ನಗರದ ಸಂಜಯ್ ಬಾಗ್ ಕಾಲೋನಿಯ ನಿವಾಸಿಯಾಗಿದ್ದಾರೆ. ಕೋಮುಗಲಭೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಕೋಮುಗಲಭೆ ಶುರುವಾಗುವ ಮೊದಲು ಫಹೀಂ ಖಾನ್ ಪ್ರಚೋದನಾತ್ಮಕ ಭಾಷಣ ಮಾಡಿದ್ದರು. ಇವರ ಭಾಷಣದ ಬಳಿಕ ಕೋಮುಗಲಭೆ ಹೆಚ್ಚಾಯಿತು. ಇವರು ಭಾಷಣ ಮಾಡಿದ ಪ್ರದೇಶದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಔರಂಗಜೇಬ್ ಸಮಾಧಿ ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದವು. ಇದಾದ ಬಳಿಕ ನಾಗ್ಪುರದಲ್ಲಿ ಭಾರಿ ಗಲಾಟೆ ನಡೆದಿತ್ತು. ಕಲ್ಲು ತೂರಾಟ, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ ನಾಗರಿಕರು ಮಾತ್ರವಲ್ಲದೆ, ಪೊಲೀಸರು ಕೂಡ ಗಾಯಗೊಂಡಿದ್ದರು.
ಗಡ್ಕರಿ ವಿರುದ್ಧ ಸೋಲು
ಫಹೀಂ ಖಾನ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಎಂಡಿಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಇವರು ಗಡ್ಕರಿ ವಿರುದ್ಧ ಸುಮಾರು 6.5 ಲಕ್ಷ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.