ಬೆಂಗಳೂರು: ನಾಗಮೋಹನ್ ದಾಸ್ ವರದಿ ಜಾರಿ ಸಂಬಂಧಿಸಿದಂತೆ ಇಂದು(ಮಂಗಳವಾರ) ಸಂಜೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಸಭೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿ ಸಂಬಂಧಿಸಿದಂತೆ, ದಲಿತ ಎಡಗೈ ಮತ್ತು ಬಲಗೈ ಸಮುದಾಯದ ಸಚಿವರಲ್ಲಿ ವರದಿ ಬಗ್ಗೆ ಒಮ್ಮತ ಮೂಡದಿರುವ ಹಿನ್ನೆಲೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೊದಲು ಸಚಿವರ ಅಭಿಪ್ರಾಯವನ್ನು ಆಲಿಸಲಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ವರದಿಯಲ್ಲಿ ವೈಜ್ಞಾನಿಕ, ತರ್ಕಬದ್ಧ ಮಾನದಂಡ ಅನುಸರಿಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದ್ದು, ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳನ್ನು ಒಂದೇ ಕಾಲಂನಲ್ಲಿ ನಮೂದಿಸಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಅಸಮಾಧಾನ ಹೊರಬಂದಿದೆ.
ಈವರೆಗೂ ರಾಜಕೀಯ ಪ್ರಾತಿನಿಧ್ಯವನ್ನೇ ಪಡೆಯದ 40ಕ್ಕೂ ಹೆಚ್ಚು ಸಮುದಾಯಗಳು ಇವೆ ಆದರೂ ಅತಿ ಹಿಂದುಳಿದ ಸಮುದಾಯಗಳು ಎಂದು ಗುರುತಿಸದೇ ಅವನ್ನು ಗ್ರೂಪ್ ಸಿ ಪಟ್ಟಿಗೆ ಸೇರಿಸಲಾಗಿದ್ದು, ಜೊತೆಗೆ ಇನ್ನೂ ಅತಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದ 50ಕ್ಕೂ ಹೆಚ್ಚು ಜಾತಿಗಳ ವಿಷಯದಲ್ಲೂ ಆಯೋಗ ತರ್ಕವಿಲ್ಲದೇ ಮಾನದಂಡಗಳನ್ನು ಅನುಸರಿಸಿದೆ ಎಂಬ ಬೇಸರ ವ್ಯಕ್ತವಾಗಿದೆ.
ಹಾಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಗೊಂದಲ ಬಗೆಹರಿಯಲಿದೆಯೋ ಇಲ್ಲವೋ ಎಂಬ ಕುತೂಹಲವಿದೆ.