ಎಲ್ಲ ಧರ್ಮಗಳಿಗೂ ಧರ್ಮ ಎಂದೇ ಹೆಸರಾದ ಸನಾತನ ಧರ್ಮ ಹಿಂದೂ ಧರ್ಮ. ಜಗತ್ತಿನ ಅತ್ಯಂತ ಪುರಾತನವಾದ ಹಿಂದೂ ಧರ್ಮ ಶಾಶ್ವತವಾದ ಧರ್ಮ ಎಂಬುದನ್ನು ದೇಶಕಾಲಗಳಿಂದಲೂ ಎಲ್ಲರೂ ಒಪ್ಪುತ್ತಾ ಬಂದಿದ್ದಾರೆ. ಹೇಗೆ ಶ್ವಾಸವಿಲ್ಲದೆ ಜೀವವಿಲ್ಲವೋ ಹಾಗೆ ಧರ್ಮವಿಲ್ಲದೆ ಜೀವನವಿಲ್ಲ ಎಂಬ ಮಾತು ಜನಜನಿತವಾದದ್ದು.
ರಾಮಾಯಣದಲ್ಲಿ ಉಲ್ಲೇಖಿತವಾಗಿರುವಂತೆ: “ಧರ್ಮಾದರ್ಥಃ ಪ್ರಭವತಿ ಧರ್ಮಾತ್ಪ್ರಭವತೇ ಸುಖಮ್ | ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ||” ಅಂದರೆ ಧರ್ಮದಿಂದಲೇ ಅರ್ಥಲಾಭವಾಗುತ್ತದೆ, ಧರ್ಮದಿಂದಲೇ ಸುಖ ಸಿಗುತ್ತದೆ. ಧರ್ಮದಿಂದ ಎಲ್ಲವೂ ಪ್ರಾಪ್ತವಾಗುತ್ತದೆ. ಈ ಜಗತ್ತು ಧರ್ಮದ ಆಶ್ರಯದಲ್ಲಿದೆ ಎನ್ನುವುದಾಗಿದೆ.
ಧರ್ಮ ಎಂಬ ಪದಕ್ಕೆ ವೇದಗಳೇ ಮೂಲ ಎಂಬುದಾಗಿ ಹೇಳಲಾಗಿದೆ. ಇದು ‘ಧೃ’ ಎಂಬ ಮೂಲಧಾತುವಿನಿಂದ ಹುಟ್ಟಿದೆ. ‘ಧೃ’ ಎಂದರೆ ಎತ್ತಿ ಹಿಡಿಯುವುದು, ಧರಿಸುವುದು ಎಂದು ಅರ್ಥ. ಹಾಗಾಗಿ ೧. ʼಧಾರಣಾತ್ ಧರ್ಮಮ್ ಇತ್ಯಾಹುಃʼ ಎಂಬ ಉಕ್ತಿಯಂತೆ ಯಾವುದನ್ನೂ ಧರಿಸಬಹುದೋ ಅದೇ ಧರ್ಮ. ಹೀಗೆ ಧರ್ಮದ ಗುಣ ಮತ್ತು ಧರ್ಮ(ಕರ್ತವ್ಯ)ವೆಂದರೆ ಎತ್ತಿ ಹಿಡಿಯುವುದು. ವ್ಯಷ್ಟಿ-ಸಮಷ್ಟಿಗಳನ್ನು, ವ್ಯಕ್ತಿ-ಸಮಾಜಗಳನ್ನು ಸುವ್ಯವಸ್ಥಿತವಾಗಿ ಸುಂದರವಾಗಿ ಎತ್ತಿ ಹಿಡಿಯುವ ತತ್ವ ವಿಶೇಷವೇ ಧರ್ಮ. ಯಾವ ತತ್ತ್ವ ಆಚಾರ- ವಿಚಾರ ಸಮುಚ್ಛಯಗಳಿಂದ ನಾವು ವ್ಯಕ್ತಿ ಸಮಾಜಗಳನ್ನು ಸಂಘಟಿಸಬಲ್ಲೆವೋ, ಸಂಸ್ಕರಿಸಬಲ್ಲೆವೋ, ಪೋಷಿಸಬಲ್ಲೆವೋ ಅದೇ ಧರ್ಮ.
ಇಂತಹ ಸನಾತನ ಹಿಂದೂ ಧರ್ಮದಲ್ಲಿ ಹಬ್ಬಗಳು ಆಚರಣೆಗಳು ಆಯಾ ಋತುವಿನೊಂದಿಗೆ ಸಂಬಂಧವನ್ನು ಹೊಂದಿದ್ದು, ಅವುಗಳು ತಮ್ಮದೇ ಆದ ಸಂದೇಶವನ್ನು ನೀಡುತ್ತವೆ. ಹಿಂದೂ ಧರ್ಮದ ಪ್ರತೀ ಹಬ್ಬಗಳು ಮನುಷ್ಯನ ಜೀವನೋತ್ಸಾಹವನ್ನು ಹೆಚ್ಚಿಸುವ ಆಶಯವನ್ನೇ ಹೊಂದಿದೆ. ಹಬ್ಬಗಳ ಹೆಸರಲ್ಲಿ ನಾವು ಹೆಚ್ಚು ಧಾರ್ಮಿಕರಾಗಬೇಕು. ಅಧ್ಯಾತ್ಮದ ಚಿಂತನೆ ನಡೆಸಬೇಕು. ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕು. ಕೌಟುಂಬಿಕ ಮೌಲ್ಯಗಳು ಭದ್ರವಾಗಬೇಕು. ಮುಖ್ಯವಾಗಿ ಮನುಷ್ಯ ಹೆಚ್ಚು ಮಾನವೀಯನಾಗಬೇಕು ಎಂಬುದೇ ಎಲ್ಲ ಹಬ್ಬಗಳ ಹಿಂದಿನ ತಿರುಳು. ಪ್ರತಿ ಹಬ್ಬದ ಆಚರಣೆಯೂ ವಿಭಿನ್ನ, ವಿಶಿಷ್ಟ, ಅದನ್ನು ಅರಿತು ಆಚರಿಸಿದರೆ ಅರ್ಥಪೂರ್ಣ ಅಂತ ಹೇಳುತ್ತಾ ಇದೆ ನಿಟ್ಟಿನಲ್ಲಿ ನಾಡಿಗೆ ದೊಡ್ಡದಾದ ಹಬ್ಬ ನಾಗರ ಪಂಚಮಿಯ ಈ ಶುಭಸಂದರ್ಭದಲ್ಲಿ ನಾಡಿನ ಎಲ್ಲ ಹಿಂದೂ ಬಾಂಧವರಿಗೆ ಕರ್ನಾಟಕ ನ್ಯೂಸ್ ಬೀಟ್ ಪರವಾಗಿ ಶುಭ ಹಾರೈಸುತ್ತ ನಾಗರ ಪಂಚಮಿಯ ಹಬ್ಬದ ಆಚರಣೆಯ ಮಹತ್ವವನ್ನು ನಮ್ಮೆಲ್ಲ ವೀಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಧಾರ್ಮಿಕ ವೈಜ್ಞಾನಿಕ ಸಾಮಾಜಿಕ ಸ್ಥರದಲ್ಲಿ ಅಲ್ಲದೆ ಜನಪದೀಯವಾಗಿಯೂ ನಾಗರ ಪಂಚಮಿ ಮಹತ್ವವನ್ನು ಹೊಂದಿದೆ.
ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಪ್ರತೀ ವರ್ಷ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡಿರುವ ಭಾರತ ದೇಶದೆಲ್ಲೆಡೆ ಈ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.
ನಾಗರ ಪಂಚಮಿ ಹಬ್ಬ ವೈಜ್ಞಾನಿಕವೋ ಧಾರ್ಮಿಕವೋ?
ಜಗತ್ತಿನ ಎಲ್ಲ ಧರ್ಮಗಳು ಆಚರಣೆಯ ಮೇಲೆ ನಿಂತಿವೆ. ಕಾಲ ದೇಶ ಋತು ಗಳಿಗೆ ಅನುಗುಣವಾಗಿ ಜಗತ್ತಿನ ಎಲ್ಲ ಜನಾಂಗಗಳು ತಮ್ಮ ತಮ್ಮ ಧರ್ಮಾಚರಣೆಗಳ ಮೂಲಕ ಏಕತೆಯನ್ನು ಸಾರುತ್ತವೆ. ಜಗತ್ತಿನ ಪುರಾತನ ಧರ್ಮವಾದ ಹಿಂದೂ ಧರ್ಮವು ಸಹ ವರ್ಷದ ೩೬೫ ದಿನಗಳಲ್ಲೂ ಜೀವ-ಜಗತ್ತು-ಈಶ್ವರ ಈ ಮೂರರ ಕುರಿತಾದ ಒಂದಲ್ಲೊಂದು ಹಬ್ಬ ಇದ್ದೆ ಇರುತ್ತದೆ.
ಸನಾತನ ಧರ್ಮ ಎಂದು ಹೆಸರಿಸಿಕೊಳ್ಳುವ ಹಿಂದೂ ಧರ್ಮ ತಪಸ್ಸು, ದಾನ, ಅರ್ಜವ, ಅಹಿಂಸಾ, ಸತ್ಯ ವ್ಯಾಖ್ಯಾನಗಳಂತಹ ಮೌಲ್ಯಗಳ ಮೇಲೆ ನಿಂತಿದೆ. ಆದಾಗ್ಯೂ ‘ಕಾಲೇನಾತ್ಮನಿ ವಿಂದತಿ’ ಎಂದಂತೆ ಸಕಾಲದಲ್ಲಿ ಹಿಂದೂ ಧರ್ಮ ಆಚರಣೆಗಳು ಮೂಲಕ ಕಾಲಕಾಲಕ್ಕೆ ಬದಲಾಗುತ್ತ ಸಾಗಿದೆ ಎಂಬದಂತೂ ಸತ್ಯ.
ಧರ್ಮ ಮತ್ತು ವಿಜ್ಞಾನ ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡರೂ ಆಂತರ್ಯದಲ್ಲೇ ಒಂದೇ ಸತ್ಯದ ಹುಡುಕಾಟದಲ್ಲಿ ಕಾಲಕಾಲಾಂತರದಿಂದಲೂ ಇವೆ. Science without religion is lame, religion without science is blind ಎನ್ನುವ ಮಹಾನ್ ವಿಜ್ಞಾನಿ Albert Einstein ಅವರ ನುಡಿಗಳು ನೆನಪಿಗೆ ಬರುತ್ತವೆ. ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ । ಜಸವು ಜನಜೀವನಕೆ – ಮಂಕುತಿಮ್ಮ ।। ಎಂಬ ತಿಮ್ಮ ಗುರುವಿನ ನುಡಿಗಳನ್ನು ಮೆಲಕು ಹಾಕುತ್ತ ಧರ್ಮಾಚರಣೆಗಳನ್ನು ವೈಜ್ಞಾನಿಕವಾಗಿ ನೋಡುವ ಪರಿಪಾಠ ಇಂದು ನೆನ್ನೆಯದಲ್ಲ.
ವಿಶ್ವದ ಹಲವು ಜಾತಿ ಜನಾಂಗದ ಜನ ತಮ್ಮನ್ನು ತಾವು ಒಂದು ಧರ್ಮಕ್ಕೆ ಸೇರಿದವರೆಂದು ಹೇಳಿಕೊಂಡರು ಆಯಾ ಧರಮ್ ಅವರ ಜೀವನದಲ್ಲಿ ವಹಿಸುವ ಪಾತ್ರವೆಷ್ಟು ಎಂಬುದು ಈಗಲೂ ತಿಳಿಯುತ್ತಿಲ್ಲ. ಜಗತ್ತಿನ ಧರ್ಮಗಳು ಸತ್ಯ ಸಂಶೋಧನೆ ಮತ್ತು ಅನ್ವೇಷಣೆಗಳನ್ನೂ ಹೊರಗಿಟ್ಟು ಸಾಗುತ್ತೀವೆ ಎಂಬ ಅಪವಾದಗಳು ಇವೆ.
ವೈಜ್ಞಾನಿಕರ, ಗಣಿತಜ್ಞರ, ದ್ರಷ್ಟಾರರ ಪರಂಪರೆಯೇ ನಮ್ಮಲ್ಲಿದೆ. ಹಲವು ಆವಿಷ್ಕಾರಗಳಲ್ಲಿ, ವಾಸ್ತುಗಳಲ್ಲಿ, ಆಚರಣೆಗಳಲ್ಲಿ ಇವು ಎದ್ದು ಕಾಣುತ್ತವೆ ಕೂಡ. ಕೆಲವು ನಮ್ಮ ಇವತ್ತಿನ ‘ಜ್ಞಾನ’ಕ್ಕೆ ಅರ್ಥವಾಗುತ್ತವೆ, ಕೆಲವು ಅರ್ಥವಾಗುವುದಿಲ್ಲ. ಜೊತೆಗೆ ಅನೇಕ ವಿಷಯಗಳ ಮೇಲೆ ಅರ್ಥಹೀನ ಕಂದಾಚಾರಗಳ ಪಾಚಿಯೂ ಬೆಳೆದಿದೆ. ಯಾವುದರಡಿಯಲ್ಲಿ ವಿಜ್ಞಾನವಿದೆ, ಯಾವುದರಡಿಯಲ್ಲಿ ಇಲ್ಲ ಎಂದು ಹೇಳುವುದು ಕಷ್ಟ. ಕಂಡ ಅನೇಕ ವಿಷಯಗಳನ್ನೂ ವಿಜ್ಞಾನವೆಂದು ಗುರುತಿಸುವ ಸ್ಥಿತಿಯಲ್ಲಿ ನಾವಿಲ್ಲ. ಬದಲಿಗೆ ಅನೇಕ ಕಂದಾಚಾರಗಳನ್ನು ವಿಜ್ಞಾನವೆಂದು ಎತ್ತಿ ಮೆರೆಸುವ ಗದ್ದಲವೇ ಆಧುನಿಕ ಧರ್ಮೋತ್ಸಾಹಿಗಳಲ್ಲಿ ಅತಿಯಾಗಿ ಕಾಣುತ್ತಿದೆ. ಮರೆವು ಮನುಷ್ಯನಿಗೆ ಸಹಜ, ಮನುಕುಲಕ್ಕೆ ಸಹಜ.
ನಾಗರ ಪಂಚಮಿ ಜನಪದೀಯ ಹಬ್ಬವೇ?
ಪಂಚಮಿ ಹಬ್ಬ ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ
ನನ್ನ ತವರೂರು ಗೋಕುಲ ನಗರ
ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ
…
ಮನಿ ಎಂಥದ್ದು ರಾಜಮಂದಿರ
ಹ್ಯಾಂಗ ಆದೀತ ಬಿಟ್ಟು ಇರಲಾಕ
ಮುತ್ತಿನಂತಾಕಿ ಆಕಿ ನನ್ನ ಅತ್ತೀಗಿ
ಪ್ರೀತಿ ಭಾಳ ನನ್ನ ಮ್ಯಾಲ ಅವಳೀಗಿ
ಬಿಟ್ಟಳೇನಮ್ಮ ಬಿಟ್ಟು ಇರಲಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ
ನನ್ನ ತವರಲ್ಲಿ ಪಂಚಮಿ ಭಾರಿ
ಮಣ ತೂಕಾದ ಬೆಲ್ಲ ಕೊಬ್ಬಾರಿ
ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ
ನಾನು ತಿನುವಾಕಿ ಅಲ್ಲೆ ಮನ ಸಾರಿ
ನಮ್ಮ ಜನಪದರು ನಾಗರ ಪಂಚಮಿಯನ್ನು ಬರಮಾಡಿಕೊಳ್ಳುವ ಪರಿ ಇದು. ಜನಪದರು ಪ್ರಕೃತಿಯ ಸಹಜತೆಯನ್ನೇ ಮೈಗೂಡಿಸಿಕೊಂಡವರು. ಅದರಲ್ಲೂ ಜನಪದವನ್ನೇ ಉಂಡುತ್ತ್ತು ಉಸಿರಾಡುವ ಶ್ರಮಿಕ ಸಂಸ್ಕೃತಿಯ ದೇವರಾಗಿ ಕಾಣುವ ನಾಗಪ್ಪ ನಾಗರಾಜ ಹಬ್ಬದ ಮೂಲಕ ಜನಪದರಲ್ಲಿ ಅಭಿವ್ಯಕ್ತಿಗೊಳ್ಳುತ್ತಾನೆ.
ನಾಡಿಗೆ ದೊಡ್ಡದಾದ ನಾಗರ ಪಂಚಮಿ ಶುರುವಾಗುವುದೇ ಆಷಾಡದ ಅಂತ್ಯಕ್ಕೆ ಶ್ರಾವಣದ ಶುರುವಿನಲ್ಲಿ. ಆಷಾಡದ ಮಳೆ ಗಾಳಿ ಚಳಿ ಎಲ್ಲವನ್ನು ಹೊತ್ತಂತೆ ಮಳೆಯ ಬೆಳೆಯ ಒಳಗೊಂಡ ಪರಿಸರ ಹಾವುಗಳು ತಮ್ಮ ಸಂತಾನೋತ್ಪತ್ತಿಗೆ ಸಜ್ಜುಗೊಂಡು ಆಹಾರ ಬೇಟೆಗೆ ಸಂಗಾತಿಯ ಆಯ್ಕೆಗೆ ಕೂಡ ಈ ಸಮಯ ಆನಂದಯಾಮಯವಷ್ಟೇ ಅಲ್ಲ ಶೃಂಗಾರಮಯ ಹೌದು.
ಜನಪದದಲ್ಲಿ ಹೋದ ಬಾರಿ ಪಂಚಮ್ಯಾಗ, ಬೇಕಾದ್ದು ಮಾಡಿದೆನವ್ವ, ನೆನಪಾಗಿ ಕಾಡುತೈತಿ ನನಗೊಟ್ಟಿ, ಅದರ ಏನು ಸುಟ್ಟಿ ಎಂಬುದಾಗಿ ಹೆಣ್ಣುಮಗಳೊಬ್ಬಳು ಹಬ್ಬವನ್ನು ನೆನಪಿಸಿಕೊಳ್ಳುವ ಪರಿ ಬರುತ್ತದೆ. ನಾಗರ ಪಂಚಮಿ ಹೆಣ್ಣು ಮಕ್ಕಳ ಹಬ್ಬವಾಗಿ ಪ್ರಾಮುಖ್ಯತೆ ಪಡೆದಿದೆ. ಗಂಡನ ಮನೆಯನ್ನು ಬೆಳಗಲು ಹೋದ ಹೆಣ್ಣಿಗೆ ಪಂಚಮಿ ಹಬ್ಬ ತವರಿನ ಕಡೆ ಮನಸ್ಸನ್ನು ವಾಲಿಸು ಹಬ್ಬ. ತವರಿನವರು ತನ್ನನ್ನು ಹಬ್ಬಕ್ಕೆ ಕರೆದೊಯ್ಯಲು ಬರುವ ದಾರಿಯನ್ನೇ ಎದುರು ನೋಡುತ್ತಿರುತ್ತಾಳೆ. ಅವರ ರುವಿಕೆಗೆ ಚಡಪಡಿಸುತ್ತಿರುತ್ತಾಳೆ. ಅವರು ಬರುವುದು ತಡವಾದರೆ ತನ್ನನ್ನು ಕರೆಯಲು ಬಾರದ ಅವರನ್ನು ತಾಯಿ ತಂದಿ ಇವರು ನಾಯಿ ಮಾರಿಯವರು ಮಾಯೆ ಇಲ್ಲದ ಮರತಾರ ಬಿಟ್ಟಿ, ಹೊಡಿಸಬೇಕ ಕಟ್ಟಿ ಎಂದು ಗರತಿ ಶಪಿಸುತ್ತಾಳೆ. ತನ್ನನ್ನು ಕರೆದೊಯ್ಯಲು ಬಂದ ಅಣ್ಣನನ್ನು ಕಂಡು ಹಿಗ್ಗಿ ಅತ್ತೆ ಮಾವಂದಿರಿಗೆ ವಂದಿಸಿ, ಗಂಡನ ಅನುಮತಿ ಪಡೆದು ನಾ ಮಾತ್ರ ಹೋಗತಿನಿ ನೀವು ಮಾತ್ರ ಕಳುಹಬೇಕು ಸಂಶಾ ಬಿಟ್ಟು ಮನದಾನ ಸಿಟ್ಟು ಎಂದು ಕೋರುತ್ತಾಳೆ. ಹಿಗ್ಗಿನಲಿ ಅಣ್ಣನ ಜೊತೆ ಗೊಂಡ್ಯಾದ ಹಣಿ ಪಟ್ಟಿ ಒನ ಹಂಡ ಹೋರಿಗಳ ಶೃಂಗರಿಸಿದ ಬಂಡಿಯಲ್ಲಿ ಅಣ್ಣನ ಜೊತೆ ಕುಳಿತು ತವರಿಗೆ ಹೊರಡುತ್ತಾಳೆ. ಅವಳಿಗೆ ತನ್ನ ಗೆಳತಿಯರೊಡನೆ ಆಡಿದ ನೆನಪು, ತನ್ನ ವಾರಿಗೆಯವರ, ತನ್ನ ಬಾಲ್ಯ ಗೆಳತಿಯರ ಜೊತೆಯಲ್ಲಿ ಪಂಚಮಿಯಲ್ಲಿ ಆಡಿದ ಜೋಕಾಲಿ, ಕೈಗಳಿಗೆ ಹಚ್ಚಿಕೊಂಡ ಮದರಂಗಿಯನ್ನು ನೆನಪಾಗುತ್ತದೆ. ಇದನ್ನು ನಾವು ಇಂದೂ ಹಳ್ಳಿಗಳಲ್ಲಿ ಕಾಣಬಹುದು. ಹಿಂದಿನ ಆ ದಿನಗಳನ್ನು ಮೆಲುಕು ಹಾಕಿಸಲು ಅವಕಾಶ ಕಲ್ಪಿಸಿಕೊಡುವ ಹಬ್ಬ ಈ ನಾಗರ ಪಂಚಮಿ ಹಬ್ಬ.
ಜನಪದರಲ್ಲಿ ನಾಗರ ಪಂಚಮಿಯ ಕುರಿತಾದ ಹತ್ತು ಹಲವು ಕಥೆಗಳಿವೆ. ರೈತನೊಬ್ಬ ಹೊಲದಲ್ಲಿ ಉಳುವಾಗ ಹಾವಿನ ಮರಿಗಳು ನೇಗಿಲಿಗೆ ಸಿಕ್ಕಿ ಸತ್ತವಂತೆ. ಇದನ್ನು ತಿಳಿದ ತಾಯಿ ನಾಗಿಣಿ ರೈತನ ಮನೆಗೆ ಹೋಗಿ ಅವರ ಮನೆಯವರನ್ನೆಲ್ಲಾ ಕಚ್ಚಿ ಸಾಯಿಸಿತಂತೆ. ಸಾಲದೆಂಬಂತೆ ಮದುವೆಯದ ರೈತನ ಮಗಳನ್ನು ಕಚ್ಚಲು ಅವಳ ಮನೆಯತ್ತ ಹೋಯಿತಂತೆ. ಅಲ್ಲಿ ಅವಳು ಮಣ್ಣಿನ ನಾಗರ ಮಾಡಿ ಹಾಲೆರೆದು ಪೂಜಿಸುತ್ತಿದ್ದಳಂತೆ. ಇದನ್ನು ಕಂಡು ಮನಸ್ಸು ಕರಗಿ ನಿನ್ನ ಮನೆಯವರನ್ನೆಲ್ಲ ಕೊಂದು ನಿನ್ನನ್ನೂ ಕೊಲ್ಲಲು ಇಲ್ಲಿಗೆ ಬಂದೆ. ನಿನ್ನ ಪೂಜೆಯಿಂದ ಸಂತೋಷಗೊಂಡಿದ್ದೇನೆ. ನಿನಗೆ ಏನು ವರ ಬೇಕೆಂದು ಕೇಳಿತಂತೆ. ಅವಳು ತಾಯಿ, ತಂದೆ, ತವರಿನವರನ್ನು ಬದುಕಿಸುವಂತೆ ಕೇಳಿದಳಂತೆ. ನಾಗಿಣಿ ವಿಷವನ್ನು ಹಿಂಪಡೆದು ಅವರನ್ನು ಬದುಕಿಸಿದಳಂತೆ. ಅಂದು ಶ್ರಾವಣ ಶುದ್ಧ ಪಂಚಮಿ ಆಗಿತ್ತೆಂದೂ, ಅದಕ್ಕಾಗಿ ಈ ಹಬ್ಬ ಹುಟ್ಟಿತೆಂದೂ, ಹೆಣ್ಣುಮಕ್ಕಳು ತವರಿಗೆ ಹೋಗುವುದು ರೂಢಿಯಲ್ಲಿ ಬಂದಿತೆಂದೂ ಕಥೆ ಹೇಳುತ್ತದೆ. ಇದೇ ರೀತಿ ಬಡ ಕುಟುಂಬದಲ್ಲಿ ಹುಟ್ಟಿದ ಸುಂದರಿಯೊಬ್ಬಳು ಸುದೈವದಿಂದ ಸಿರಿವಂತಳಾದಳಂತೆ. ಅಣ್ಣ ನಾಗರ ಪಂಚಮಿಗೆ ಅವಳನ್ನು ಊರಿಗೆ ಕರೆದೊಯ್ಯಲು ಬಂದಾಗ ದರಿದ್ರದಿಂದ ಕೂಡಿದ ಅಣ್ಣನಿಗೆ ಆಭರಣದಿಂದ ಕಂಗೊಳಿಸುತ್ತಿದ್ದ ತಂಗಿಯನ್ನು ಕಂಡು ಅವಳ ಆಭರಣಕ್ಕೆ ಪೀಡಿಸಿ ಕೊಡಲು ಒಪ್ಪದಾಗ ಅವಳನ್ನು ಕೊಲ್ಲಲು ಕಲ್ಲೊಂದನ್ನು ಎತ್ತಲು ಹೋದನಂತೆ. ಅದರ ಕೆಳಗಿದ್ದ ನಾಗರ ಅವನಿಗೆ ಕಚ್ಚಿ ತಂಗಿಯನ್ನು ಉಳಿಸಿತಂತೆ. ಅಣ್ಣನ ಸಾವಿನಿಂದ ನೊಂದ ತಂಗಿ ನಾಗನನ್ನು ಪ್ರಾರ್ಥಿಸಿ ಅಣ್ಣನ ಜೀವವನ್ನು ಮರಳಿ ಪಡೆದಳಂತೆ. ಅಂದು ಶ್ರಾವಣ ಶುದ್ಧ ಪಂಚಮಿ ಆಗಿತ್ತಂತೆ. ಈ ಕಥೆಗಳು ನಾಗರ ಪಂಚಮಿ ಹಬ್ಬ ಹೆಣ್ಣುಮಕ್ಕಳಿಗೆ ಏಕೆ ವಿಶೇಷ ಎನ್ನುವುದನ್ನು ಹೇಳುತ್ತವೆ.
ನಾಗಪ್ಪನಿಗೆ ಪೂಜೆ ಮಾಡಿ ಹಾಲು ಹೊಯ್ಯುವ ದಿನ ಗೆಳತಿಯರೊಡನೆ ಕೂಡಿ
ನಾಗರ ಪಂಚಮಿ ನಾಡಿಗೆ ದೊಡ್ಡದು
ನಾಡ ನಾಯರು ಕೂಡೋಣ, ಎಲೆ ಗೆಳತಿ
ನಾಗಪ್ಪಗ ಹಾಲ ಎರಿಯೋಣ
ನಾಗಪ್ಪಗ ಹಾಲ ಹೊಯ್ಯೋಣ
ನಾಗರ ಹೆಡಿಯಂಗ ಆಡೋಣ
ನಾಗರ ಪಂಚಮಿ ನಾಡ ಹೆಣ್ಣಿಗೆ ಹಬ್ಬ
ನಾಗಪ್ಪಗ ಹಾಲ ಎರಿಯೋಣ ನನಗೆಣತಿ
ನಾಗರ ಹೆಡಿಯಂಗ ಆಡೋಣ.
ಹಾರೂತಿ ನಿನ ಬಣ್ಣ ಹಾಲ ಕಾಸಿದ ಗಿಣ್ಣ
ಕಾಜಿನ ಬಳೆಯು ಕೈತುಂಬ ಹಾಕ್ಕೊಂಡು
ನಾಗಪ್ಪಗ ಹಾಲ ಎರೆದಾಳೋ
ಗುರುದೇವ ನಿಮಪಾಲ ಹರಹರನೆ
ನಿಮಪಾಲ ಶರಣರಿಗೆ ಹಾಲು
ಹಿರಿಯರಿಗೆ ಎರೆಯೋಣ ಕಿರಿಯರಿಗೆ ಹಾಡಿ ಹರಿಸೋಣ
ವಾರೀಗಿ ಗೆಳತೇರ ಕೇರಿಯ ಕೆಳೆದೇರ
ಸೇರಿ ಒಂದೆಡೆ ಕೋಡೋಣ ಜೋಕಾಲಿ
ತೂರಿ ಜೀತವ ಆಡೋಣ
ಇದು ಹೆಣ್ಣು ಮಕ್ಕಳ ಹಬ್ಬ. ಮಾಂಗಲ್ಯಪ್ರದ, ಸಂತಾನಪ್ರದ ಎಂದು ನಂಬಿಗೆ.
ನಾಗರ ಪಂಚಮಿ ನಾಡಹೆಣ್ಣಿಗೆ ಹಬ್ಬ
ನಾಗಪ್ಪಗ್ಹಾಲ ಎರೆಯೋಣ ನನ್ ಗೆಳತಿ
ನಾಗರ ಹೆಡಿಹಾಂಗ ಆಡೋಣ
ಅಳ್ಳಿಟ್ಟು ತಂಬಿಟ್ಟು ಮಾಡಿಟ್ಟ ಎಳ್ಳುಂಡೆ
ದಳ್ಳುರಿ ಕಣ್ಣ ಹಣೆಯಾನ ಕೊರಳಾನ
ನಾಗ ನಿನಗೆಡೆಯೋ ಕೈಮುಗಿರೋ||
ಹೊಸ ಸೀರೆ, ಕುಪ್ಪಸ ತೊಟ್ಟುಕೊಂಡು ಮುಡಿಯನ್ನು ಸಿಂಗರಿಸಿಕೊಂಡು ಕೈತುಂಬ ಬಳೆ ತೊಟ್ಟು ಸಿಂಗಾರವಾಗಿ ನಾಗಪ್ಪನಿಗೆ ಹಾಲೆರೆಯುವ ಗರತಿತನ್ನ ಗೆಳತಿಯರನ್ನು ಸಡಗರ, ಸಂಭ್ರಮದಿಂದ ನಾಗನ ಹಾಲೆರೆಯಲು ಕರೆಯುತ್ತಾಳೆ. ಹೀಗೆ ಹಾಲು ಎರೆಯುವಾಗ ಎಲ್ಲರಿಗೂ ಪಾಲು ಸಲ್ಲಲೆಂದು ಪ್ರಾರ್ಥಿಸುತ್ತಾಳೆ. ತಂಬಿಟ್ಟು, ಎಳ್ಳುಂಡೆ ನೈವೇದ್ಯ ಮಾಡುತ್ತಾಳೆ. ತಾನೂ ತಿಂದು ಗೆಳತಿಯರಿಗೂ ಕೊಡುತ್ತಾಳೆ. ಗೆಳತಿಯರನ್ನು ಜೋಕಾಲಿ ಆಡಲು ಕರೆಯುತ್ತಾಳೆ. ಹೀಗೆ ಆಡುವಾಗ ತನ್ನ ಗಂಡನ ಮಯ ಸುದ್ಧಿಗಳನ್ನು ಹಂಚಿಕೊಳ್ಳುತ್ತಾಳೆ. ಇದು ನಮ್ಮ ಜಾನಪದರು ನಾಗರ ಪಂಚಮಿಯ ಬಗೆಗೆ ಹಾಡಿದ ಒಂದು ಹಾಡು.
ಪಂಚಮಿ ಬರಲೆವ್ವ ಮಂಚ ಕಟ್ಟಲಿ ಮನಿಗೆ
ಕೆಂಚಿ ಗೆಳತೇರು ಕೂಡಾಲಿ ನಮಜೀಕ
ಮಿಂಚಿ ಮುಗಿಲಿಗಿ ಏರಾಲಿ.
ನಮ್ಮ ಜೋಕಾಲಿಯ ಜೀಕು ಮುಗಿಲು ಮುಟ್ಟಲಿ ಎಂದು ಗರತಿ ಹಬ್ಬ ಮುಗಿದ ನಂತರ ಮುಂದಿನ ಹಬ್ಬಕ್ಕೆ ಮತ್ತೆ ಕೂಡೋಣವೆಂದು ಗೆಳತಿಯರಿಗೆ ಹೇಳುವುದಿದೆ. ನಾಗರ ಪಂಚಮಿ ನಮ್ಮ ಹಳ್ಳಿಗರ ಒಂದು ವಿಶಿಷ್ಟವಾದ ಹಬ್ಬ. ಪಂಚಮಿ ಹಬ್ಬದ ಸೊಗಸನ್ನು ನಾವು ಹಳ್ಳಿಗಳಲ್ಲಿ ಮಾತ್ರ ಕಾಣಲು ಸಾಧ್ಯ.
-ರಾಜ್ ಆಚಾರ್ಯ, ಸಾಹಿತಿಗಳು.