ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವಿರುದ್ಧ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಕೆಂಡಾಮಂಡಲವಾಗಿದ್ದಾರೆ. ಮಹಿಳಾ ಅಧಿಕಾರಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಸಿಎಸ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ಸುದ್ದಿಯಾಗಿದೆ. ರಾಜ್ಯದಲ್ಲೇ ದೊಡ್ಡ ಸ್ಥಾನದಲ್ಲಿ ಕುಳಿತ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಇಷ್ಟೊಂದು ಹೀನಾಯವಾಗಿ ಮಾತನಾಡಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ರವಿಕುಮಾರ್ ಮಾಡಿರುವ ಅಪರಾಧ, BNS ಸೆಕ್ಷನ್ 79 ರ ಪ್ರಕಾರ ಮಹಿಳೆಗೆ ಮಾನಹಾನಿ ಆಗಿರುವುದು ಕ್ರಿಮಿನಲ್ ಅಫೆನ್ಸ್ ಆಗುತ್ತದೆ. ಹೀಗಾಗಿ ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಎನ್.ರವಿಕುಮಾರ್ ಮಹಿಳೆಯರ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಮ್ಮೆ ಇವರಿಗೆ ಶಿಕ್ಷೆ ಆದರೆ ಎಲ್ಲರೂ ಬುದ್ಧಿ ಕಲಿಯುತ್ತಾರೆ. ಹೀಗಾಗಿ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಆಯುಕ್ತರು ಸಂಪೂರ್ಣ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೈಕೋರ್ಟ್ ಈ ಹಿಂದೆ ಇವರಿಗೆ ಛೀಮಾರಿ ಹಾಕಿತ್ತು. ಆಗ ಕ್ಷಮೆ ಕೇಳಿ ಬಂದಿದ್ದರು. ಈಗ ಮತ್ತೆ ತಪ್ಪು ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಹೀಗೆ ಮಾತನಾಡಿದರೆ ಸಾಮಾನ್ಯ ಹೆಣ್ಣುಮಕ್ಕಳ ಗತಿ ಏನು ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್. ರವಿಕುಮಾರ್ ಹೇಳಿಕೆಯನ್ನು ಮಹಿಳಾ ಆಯೋಗ ಖಂಡಿಸುತ್ತದೆ. ಇದರ ಬಗ್ಗೆ ಕಾನೂನು ಕ್ರಮ ಆಗಬೇಕು. ವರದಿಯನ್ನು ಆಯೋಗಕ್ಕೆ ಆರು ದಿನಗಳ ಒಳಗಾಗಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.