ಬೆಂಗಳೂರು: ಎಷ್ಟೋ ಕಠಿಣ ಕಾನೂನು, ಸಾಕ್ಷರತೆ ಬಂದರೂ ಮಹಿಳೆ ಇಂದಿಗೂ ಸಮಾಜದ ಎರಡನೇ ಪ್ರಜೆಯಾಗಿಯೇ ಇರುವುದು ನೋವಿನ ಸಂಗತಿ. ಮಹಿಳೆಯ ಬದುಕನ್ನು ಸಬಲೀಕರಣ ಮಾಡುವುದಕ್ಕಾಗಿಯೇ ಸರ್ಕಾರವು ಮಹಿಳಾ ಆಯೋಗವನ್ನು ರಚನೆ ಮಾಡಿದೆ. 1997ರಲ್ಲಿ ಆರಂಭವಾಗಿರುವ ಮಹಿಳಾ ಆಯೋಗಕ್ಕೆ ಇಲ್ಲಿಯವರೆಗೆ ಸಾಕಷ್ಟು ಮಹಿಳೆಯರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಡಾ. ನಾಗಲಕ್ಷ್ಮೀ ಚೌಧರಿ ಅಧ್ಯಕ್ಷತೆ ವಹಿಸಿಕೊಂಡ ನಂತರ ಅದು ಸದ್ದು ಮಾಡುತ್ತಿರುವುದಂತೂ ಸತ್ಯ ಎಂದು ಹಲವು ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಡಾ. ನಾಗಲಕ್ಷ್ಮೀ ಚೌಧರಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮಹಿಳೆಯರ ಸಮಸ್ಯೆಗಳನ್ನು ಹುಡುಕಿ ಹುಡುಕಿ ಹೋಗಿ ಪರಿಹಾರ ಒದಗಿಸುತ್ತಿರುವುದು ಕಣ್ಣಿಗೆ ಹಾಗೂ ಮನಸ್ಸಿಗೆ ರಾಚುತ್ತಿದೆ ಎಂದು ನ್ಯಾಯ ಪಡೆದ ಮಹಿಳೆಯರು ಹೇಳುತ್ತಿದ್ದಾರೆ.
ಈ ಅವಧಿಯಲ್ಲಿ ಮಹಿಳಾ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಸಾಮಾಜಿಕ ಪಿಡುಗು ಎಂದೇ ಗುರುತಿಸಿಕೊಂಡಿದ್ದ ಸಾಕಷ್ಟು ನೋವುಗಳಿಗೆ ಮುಲಾಮು ಸಿಕ್ಕಿದೆ ಎಂದರೆ ತಪ್ಪಾಗಲಾರದು. ಗರ್ಭಿಣಿ ಹಾಗೂ ಬಾಣಂತಿಯರ ಸಾವು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಬಳ್ಳಾರಿ, ಬೆಳಗಾವಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪ್ರಕರಣಗಳು ಮಹಿಳೆಯರ ನಿದ್ದೆಗೆಡಿಸಿದ್ದವು. ಆದರೆ, ಅಷ್ಟೇ ದಿಟ್ಟತನದಿಂದ ನಾಗಲಕ್ಷ್ಮೀ ಚೌಧರಿ ಈ ಸಮಸ್ಯೆಯ ಮೂಲ ಹುಡುಕಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು, ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಸ್ವಚ್ಛತೆ, ವೈದ್ಯರ ನಿರ್ಲಕ್ಷ್ಯ, ಸಿಬ್ಬಂದಿ ಕೊರತೆಗಳನ್ನು ಪತ್ತೆ ಹಚ್ಚಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮಹಿಳೆಯರ ಬದುಕಿಗೆ ಭರವಸೆ ಮೂಡಿಸುವ ಕೆಲಸ ಮಾಡಲು ಪ್ರಯತ್ನಿಸಿದ್ದಾರೆಂದರೆ ತಪ್ಪಾಗಲಾರದು.
ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರ ಲೈಂಗಿಕ ದೌರ್ಜನ್ಯ ಕೂಗಿಗೆ ನ್ಯಾಯ ಒದಗಿಸುವುದಕ್ಕಾಗಿ ಸಮಿತಿ ರಚಿಸಲು ದಿಟ್ಟ ನಿರ್ಧಾರ ತೆಗೆದುಕೊಂಡರು. ಅಧಿಕಾರಕ್ಕೇರಿದ ಒಂದೇ ವರ್ಷಧಲ್ಲಿ ರಾಜ್ಯದ 31 ಜಿಲ್ಲೆಯ ಪ್ರವಾಸ ಕೈಗೊಂಡು ಮಹಿಳೆಯರಿಗೆ ಸಾಂತ್ವನ ಹೇಳಿ, ಮಹಿಳಾ ಆಯೋಗ ಒಂದು ಇದೆ. ಅದು ನಿಮಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತದೆ ಎಂಬುವುದನ್ನು ತೋರಿಸಿ ಕೊಟ್ಟರು ಎನ್ನಬಹುದು. ಹಲವೆಡೆ ಮಹಿಳೆಯರ ಪರ ಧ್ವನಿ ಎತ್ತಿ ಸ್ಥಳದಲ್ಲೇ ಪರಿಹಾರ, ನ್ಯಾಯ ಒದಗಿಸಿರುವುದನ್ನು ಕೂಡ ನಾವು ಇಲ್ಲಿ ಸ್ಮರಿಸಬಹುತು. ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದು, ದಿಟ್ಟ ಅಧ್ಯಕ್ಷೆ ಎಂದೇ ಹೆಸರು ಮಾಡಿರುವ ಡಾ. ನಾಗಲಕ್ಷ್ಮೀ ಚೌಧರಿ ಅವರು ಮಹಿಳೆಯರ ಕಣ್ಣೀರು ಒರೆಸುವ, ನ್ಯಾಯ ಒದಗಿಸುವ ನಾಯಕಿಯಾಗಲಿ ಎಂದು ರಾಜ್ಯದ ಮಹಿಳೆಯರು ಮನವಿ ಮಾಡುತ್ತಿದ್ದಾರೆ.