ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ 33ನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ ಮೂವರು ಪ್ರತಿಷ್ಠಿತ ವ್ಯಕ್ತಿಗಳಿಗೆ “ನಾಡೋಜ” ಗೌರವ ಪ್ರಕಟಿಸಿದೆ. ಸಾಹಿತಿ ಕುಂ. ವೀರಭದ್ರಪ್ಪ (ಕುಂ.ವೀ), ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್, ಮತ್ತು ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಈ ಗೌರವ ಪಡೆಯಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಂಗಳವಾರ ಪ್ರಕಟಿಸಿದ್ದಾರೆ. ಘಟಿಕೋತ್ಸವ ಏಪ್ರಿಲ್ 4, 2025ರಂದು ನಡೆಯಲಿದೆ.
ಘಟಿಕೋತ್ಸವದ ಕುರಿತು ಮಾಹಿತಿನೀಡುವ ಸುದ್ದಿಗೋಷ್ಠಿಯಲ್ಲಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ ನಾಡೋಜ ಪ್ರಶಸ್ತಿಗೆ ಪಾತ್ರರಾದವರ ಕುರಿತು ವಿವರ ನೀಡಿದರು.
-ಶಿವರಾಜ್ ವಿ. ಪಾಟೀಲ್: ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತರಾಗಿದ್ದು, ಕಾನೂನು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರು.
- ಕುಂ. ವೀರಭದ್ರಪ್ಪ| ವಿಜಯನಗರ ಜಿಲ್ಲೆಯ ಕೊಟ್ಟೂರಿನ ಪ್ರಖ್ಯಾತ ಬರಹಗಾರ ಮತ್ತು ಚಿಂತಕರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು.
- ಪಂಡಿತ್ ಎಂ. ವೆಂಕಟೇಶ್ ಕುಮಾರ್: ಧಾರವಾಡದ ಖ್ಯಾತ ಹಿಂದೂಸ್ತಾನಿ ಗಾಯಕರಾಗಿ, ಪದ್ಮಶ್ರೀ ಪುರಸ್ಕೃತರಾಗಿ ಸಂಗೀತ ಕ್ಷೇತ್ರದಲ್ಲಿ ಮನ್ನಣೆ ಗಳಿಸಿದವರು.
ನಾಡೋಜ ಗೌರವವು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ಇದು ಗೌರವ ಡಾಕ್ಟರೇಟ್ (ಡಿ.ಲಿಟ್) ಪದವಿಗೆ ಸಮಾನವಾಗಿದೆ. ಈ ಗೌರವವನ್ನು ಸಾಹಿತ್ಯ, ಸಂಗೀತ, ಕಾನೂನು, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದವರಿಗೆ ಪ್ರದಾನ ಮಾಡಲಾಗುತ್ತದೆ.
ಘಟಿಕೋತ್ಸವ ಕಾರ್ಯಕ್ರಮ - ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಡಿ.ಲಿಟ್ ಮತ್ತು ಪಿಎಚ್‌ಡಿ ಪದವಿಗಳನ್ನು ವಿತರಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಮತ್ತು ಬೆಂಗಳೂರಿನ ರಾಮಯ್ಯ ತಾಂತ್ರಿಕ ಸಂಸ್ಥೆಯ ಮುಖ್ಯ ಸಂಶೋಧನಾ ಸಲಹೆಗಾರರಾದ ಪ್ರೊ. ರಾಜಾಸಾಬ್ ಎ.ಎಚ್. ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
- ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಡಾ. ಎ. ಶ್ರೀಧರ, ಡಾ. ಅಮರೇಶ ಯತಗಲ್, ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಚಲುವರಾಜು, ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ಶೈಲಜ ಇಂ. ಹಿರೇಮಠ, ಡಾ. ಅಶೋಕುಮಾರ ರಂಜೇರೆ, ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ. ಎಸ್.ಆರ್. ಚನ್ನವೀರಪ್ಪ, ಡಾ. ಈ. ಎರ‍್ರಿಸ್ವಾಮಿ, ಡಾ. ಎಸ್.ವೈ. ಸೋಮಶೇಖರ, ಡಾ. ಎ. ವೆಂಕಟೇಶ, ಡಾ. ಡಿ. ಮೀನಾಕ್ಷಿ ಮತ್ತು ಇತರರು ಉಪಸ್ಥಿತರಿದ್ದರು.