ಮೈಸೂರು: ನಾಡ ಅಧಿದೇವತೆ ಮೈಸೂರು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾಕ್ಕೆ ಇಂದು ಅದ್ದೂರಿ ಚಾಲನೆ ಸಿಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ದಸರಾ ಉದ್ಘಾಟನೆ ಅತಿಥಿ ಸಾಹಿತಿ ಬಾನು ಮುಷ್ತಾಕ್ ಅವರು ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟದಲ್ಲಿ ಈಡುಗಾಯಿ ಒಡೆದರು. ಅರ್ಚಕರು ಪೂಜೆ ಸಲ್ಲಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಬಾನು ಮುಷ್ತಾಕ್ ಅವರಿಗೆ ಹೂವಿನ ಹಾರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮೈಸೂರಿನ ಶಾಸಕರು, ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು. ಬಾನು ಮುಷ್ತಾಕ್ ಅವರು ನಾಡದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ ಭಕ್ತಿಯಿಂದ ಭಾಗಿಯಾಗಿ ಮಹಾಮಂಗಳಾರತಿ ಸ್ವೀಕರಿಸಿದ್ದಾರೆ.