ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿರುವ ಮೈಸೂರು ವಾರಿಯರ್ಸ್ ತಂಡ ಸೆಮಿಫೈನಲ್ ಹಾದಿಯನ್ನು ಖಚಿತಪಡಿಸಿಕೊಂಡಿದೆ.
ಅಲ್ಲದೇ, ಮೈಸೂರಿನ ಈ ಗೆಲುವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡದ ಸೇಮಿಸ್ ಹಾದಿ ಅಧಿಕೃತವಾಗಿ ಮುಚ್ಚಿದಂತಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರ್ಯಾಗನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗೆ 178 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಟಾಸ್ ಗೆದ್ದ ಮೈಸೂರು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಆಟಗಾರ ರೋಹನ್ ಪಟೇಲ್ 12 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ ನಾಯಕ ನಿಖಿನ್ ಜೋಶ್ 14 ರನ್ ಗಳಿಸಿದರು. ತುಶಾರ್ 26 ಎಸೆತಗಳಲ್ಲಿ 43 ರನ್ ಗಳ ಇನ್ನಿಂಗ್ಸ್ ಕಟ್ಟಿದರು. ಸಿದ್ಧಾರ್ಥ್ ಮಾತ್ರ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ಲೋಚನ್ 15 ಎಸೆತಗಳಲ್ಲಿ 25 ರನ್ ಹಾಗೂ ದರ್ಶನ್ 8 ಎಸೆತಗಳಲ್ಲಿ 18 ರನ್ ಗಳಿಸಿದರು. ಹೀಗಾಗಿ ತಂಡದ ಮೊತ್ತ 178 ರನ್ ಆಗುವಂತೆ ಮಾಡಿದರು.
ಈ ಗುರಿ ಬೆನ್ನಟ್ಟಿದ ಮೈಸೂರು ತಂಡಕ್ಕೆ ಆರಂಭಿಕ ಆಟಗಾರರು ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ 42 ರನ್ ಗಳ ಜೊತೆಯಾಟ ನೀಡಿತು. ಕಾರ್ತಿಕ್ 14 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಬಂದ ನಾಯಕ ಕರುಣ್ ನಾಯರ್ ಎಂದಿನಂತೆ ತಮ್ಮ ಅಧ್ಭುತ ಫಾರ್ಮ್ ನಲ್ಲಿ ಮಿಂಚಿದರು. ಕಾರ್ತಿಕ್ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ಗಳಿಸಿದರು. ಇನ್ನೊಂದೆಡೆ ಕರುಣ್, ಮನೋಜ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕರುಣ್ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 64 ರನ್ ಗಳಿಸಿ ಔಟಾದರೆ, ಮನೋಜ್ ಭಾಂಡಿಗೆ 6 ಎಸೆತಗಳಲ್ಲಿ 10 ರನ್, ಸುಚಿತ್ 3 ಎಸೆತಗಳಲ್ಲಿ 9 ರನ್ ಗಳಿಸಿದರು. ಪರಿಣಾಮ ಮೈಸೂರು ತಂಡ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಟಿಕೆಟ್ ಭದ್ರಪಡಿಸಿಕೊಂಡಿತು.