ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ‘ಜಂಬೂಸವಾರಿ’ಗೆ 28 ದಿನಗಳು ಬಾಕಿ ಇದ್ದು, ಅಂಬಾರಿ ಆನೆ ‘ಅಭಿಮನ್ಯು’ಗೆ ಭಾರ ಹೊರಿಸುವ ತಾಲೀಮು ಆರಂಭವಾಗಿದೆ.
ಅರಮನೆಯಿಂದ 5 ಕಿ.ಮೀ ದೂರದ ಬನ್ನಿಮಂಟಪಕ್ಕೆ ಸುಮಾರು 500 ಕೆ.ಜಿ ಭಾರ ಹೊತ್ತ ಅಭಿಮನ್ಯು, ಕುಮ್ಮಿ ಆನೆಗಳಾದ ಕಾವೇರಿ ಹಾಗೂ ಹೇಮಾವತಿಯೊಂದಿಗೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಉಳಿದ 11 ಆನೆಗಳು ಅವರನ್ನು ಅನುಸರಿಸಿದವು. ‘ಗೋಪಿ’ ಆನೆ ವಿಶ್ರಾಂತಿಯಲ್ಲಿತ್ತು.
ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಡಿಸಿಎಫ್ ಐ.ಬಿ.ಪ್ರಭುಗೌಡ ಸಂಜೆ 4.02ಕ್ಕೆ ‘ಅಭಿಮನ್ಯು’ ಮತ್ತು ಕುಮ್ಮಿಗಳಾದ ‘ಹೇಮಾವತಿ’ ಹಾಗೂ ‘ಕಾವೇರಿ’ ಆನೆಗಳಿಗೆ ಪೂಜೆ ಸಲ್ಲಿಸಿ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಿದ್ದಾರೆ.
ಅರಮನೆ ಅರ್ಚಕ ಪ್ರಹ್ಲಾದ ರಾವ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಅರಿಸಿನ, ಗಂಧವನ್ನಿಟ್ಟು, ಧೂಪ-ದೀಪದ ಆರತಿ ಮಾಡಿದರು. ಪಾದಗಳಿಗೆ ಹೂಗಳನ್ನಿಟ್ಟು ಪೂಜೆ ಸಲ್ಲಿಸಿದರು. ಹಣ್ಣು, ಕಾಯಿ, ಕಬ್ಬುಗಳ ನೈವೈದ್ಯ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೂಗಳನ್ನು ನೀಡಿ ‘ದುರ್ಗಾ ಸ್ತೋತ್ರ’ವನ್ನು ಹೇಳಿಸಿ, ಪುಷ್ಪವೃಷ್ಟಿ ಮಾಡಿಸಿದರು.
ಮೊದಲಿಗೆ ಆನೆಗಳನ್ನು ಕುಳ್ಳಿರಿಸಿದ ಮಾವುತರು ನಮ್ಹಾ ಗಾದಿ (ಮೆತ್ತನೆಯ ಹಾಸಿಗೆ)ಯನ್ನು ಆನೆಯ ಬೆನ್ನ ಮೇಲೇರಿಸಿ ಕಟ್ಟಿದರು. ನಂತರ, ವಿವಿಧ ತೂಕಗಳ ಮರಳಿನ ಮೂಟೆಗಳನ್ನು ಹೊರಿಸಲಾಯಿತು. ನಂತರ ಪ್ರಹ್ಲಾದ ರಾವ್ ಆರತಿ ಬೆಳಗಿದರೆ, ತಾಲೀಮು ಉಸ್ತುವಾರಿ ಅಕ್ರಂ ಈಡುಗಾಯಿ ಒಡೆದರು.
‘ಅಭಿಮನ್ಯು’, ‘ಕಾವೇರಿ’ ಹಾಗೂ ‘ಹೇಮಾವತಿ’ಯನ್ನು ‘ಭೀಮ’, ‘ಏಕಲವ್ಯ’, ‘ಸುಗ್ರೀವ’, ‘ಮಹೇಂದ್ರ’, ‘ಪ್ರಶಾಂತ’, ‘ಕಾವೇರಿ’, ‘ಕಂಜನ್’, ‘ರೂಪ’, ಶ್ರೀಕಂಠ’ ಹಾಗೂ ‘ಧನಂಜಯ’ ಆನೆಗಳು ಅನುಸರಿಸಿದವು. ಮಧ್ಯದಲ್ಲಿ ಅನುಭವಿಗಳಾದ ‘ಮಹೇಂದ್ರ’, ಕೊನೆಯಲ್ಲಿನ ‘ಅರ್ಜುನ’ನ ಜಾಗದಲ್ಲಿ ‘ಧನಂಜಯ’ ಇದ್ದು, ಗಜಪಡೆ ಸಾಲನ್ನು ನಿರ್ದೇಶಿಸುತ್ತಿದ್ದರು.
ಕೈ ಮುಗಿದರು: ಆನೆಗಳು ‘ಜಂಬೂಸವಾರಿ’ ಮಾರ್ಗದಲ್ಲಿ ಸಾಗುತ್ತಿದ್ದಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಆನೆಗಳೊಂದಿಗೆ ಸೆಲ್ಪಿ, ಫೋಟೊ ತೆಗೆದುಕೊಂಡರು. ಗಜಪಡೆಗೆ ಕೈ ಮುಗಿದರು.
ಸಂಜೆ 4.42ಕ್ಕೆ ಅರಮನೆ ಬಲರಾಮ ದ್ವಾರದಿಂದ ಹೊರಟ ಆನೆಗ ಬನ್ನಿಮಂಟಪ ತಲುಪಲು ಒಂದೂವರೆ ಗಂಟೆ ತೆಗೆದುಕೊಂಡವು. ನಂತರ 20 ನಿಮಿಷ ವಿರಮಿಸಿ ರಾತ್ರಿ 8ಕ್ಕೆ ಅರಮನೆಗೆ ವಾಪಸಾದವು.


















