ಮೈಸೂರು: ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ಸಮೇತ ಯುವಕನೋರ್ವ ಸುಟ್ಟು ಕರಕಲಾಗಿರುವ ಘಟನೆ ನಂಜನಗೂಡು ಪಟ್ಟಣದ ಹೊರವಲಯದ ಕೋರೆಹುಂಡಿಗೆ ಬಳಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂರು ತಾಲೂಕಿನ ರಾಂಪುರ ಗ್ರಾಮದ ನಿವಾಸಿ ಆದಿತ್ಯ (23) ಮೃತಪಟ್ಟ ಯುವಕ. ನಂಜನಗೂಡಿನಿಂದ ಕೋರೆಹುಂಡಿಗೆಗೆ ತೆರಳುವ ರಸ್ತೆಯಲ್ಲಿರುವ ಹುಲ್ಲಹಳ್ಳಿ ನಾಲೆ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ಹಾಗೂ ಆದಿತ್ಯನ ಶವ ಸಂಪೂರ್ಣ ಸುಟ್ಟಿರುವ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.ಯುವಕನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ
ಖಾಸಗಿ ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಆಧಾರದ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಆದಿತ್ಯ, ಸೋಮವಾರ ಬೆಳಗ್ಗೆ ತನ್ನ ಬೈಕ್ ದುರಸ್ತಿ ಮಾಡಿಸುತ್ತೇನೆ ಎಂದು ಮನೆಯಿಂದ ಹೋದವನು ವಾಪಸ್ ಬಂದಿರಲಿಲ್ಲ, ಸಂಜೆ 4ಕ್ಕೆ ಆದಿತ್ಯನ ತಾಯಿ ಅಂಬಿಕಾ ಅವರು ಮನೆಗೆ ಬೇಗ ಬರುವಂತೆ ಕರೆ ಮಾಡಿದಾಗ, ಆದಿತ್ಯ ಮನೆಗೆ ಬೇಗ ಬರುವುದಾಗಿ ತಾಯಿಗೆ ತಿಳಿಸಿದ್ದಾನೆ. ಸಂಜೆ 7ಕ್ಕೆ ಬೈಕ್ ಸಮೇತ ಬೆಂಕಿಗೆ ಆಹುತಿಯಾಗಿರುವುದಾಗಿ ಪರಿಚಿತರು ಪೋನ್ ಮೂಲಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮೃತನ ತಂದೆ ಮಾದೇಶ, ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ನಂಜನಗೂಡು ಗ್ರಾಮಾಂತರ ಠಾಣೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪೋಲಿಸರನ್ನೇ ಎಳೆದಾಡಿದ ಯುವಕರು | ಐವರ ಮೇಲೆ FIR



















