ಮೈಸೂರು : ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಮಾಡಿ ಮೂವರನ್ನು ಬಲಿ ಪಡೆದ ನಂತರ ಅರಣ್ಯ ಇಲಾಖೆಯ ಹುಲಿಸೆರೆ ಕಾರ್ಯಾಚರಣೆಯ ಪಡೆ ಕಳೆದ 26 ದಿನಗಳಲ್ಲಿ 5 ಹುಲಿ ಮರಿಗಳು ಸೇರಿದಂತೆ 10 ಹುಲಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಮೈಸೂರು ಜಿಲ್ಲೆಯ ಸರಗೂರು, ಹೆಚ್.ಡಿ.ಕೋಟೆ ಹಾಗೂ ನಂಜನಗೂಡು ಭಾಗದ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಯಡಿಯಾಳ, ನುಗು, ಮೊಲೆಯೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅಕ್ಟೋಬರ್ 16 ರಿಂದ ನಡೆದ ಹುಲಿ ದಾಳಿ ಪ್ರಕರಣದಲ್ಲಿ ಮೂವರು ರೈತರು ಮೃತ ಪಟ್ಟಿದ್ದರು. ಒಬ್ಬ ರೈತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೀತಿಯ ಹುಲಿ ದಾಳಿಗಳಿಂದ ಗ್ರಾಮದ ಜನರಲ್ಲಿ ಆತಂಕ ಉಂಟಾಗಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಹುಲಿಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಿ 10 ಹುಲಿಗಳನ್ನು ಸೆರೆ ಹಿಡಿದಿದೆ.
ಸರಗೂರು ತಾಲೂಕಿನ ಬಡಗಲಾಪುರ ಗ್ರಾಮದಲ್ಲಿ ಅ.16 ರಂದು ಹೊಲದಲ್ಲಿ ಕೆಲಸ ಮಾಡುತಿದ್ದ ರೈತ ಬಡಗಲಾಪುರದ ಮಹಾದೇವೇಗೌಡ ಎಂಬುವವರ ಮೇಲೆ ಹುಲಿ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಹಾದೇವೇಗೌಡ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ವಹಿಸಿಕೊಂಡಿದೆ. ಅರಣ್ಯ ಇಲಾಖೆ ಅ.18ರಂದು ಬಡಗಲಾಪುರ ಗ್ರಾಮದ ಬಳಿಯಲ್ಲಿ ಒಂದೂವರೆ ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿದಿತ್ತು. ಆ ನಂತರ ಡ್ರೋನ್ ಕ್ಯಾಮರಾದಲ್ಲಿ ಈ ಭಾಗದಲ್ಲಿ ಇನ್ನೂ ಮೂರು ಹುಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಅವುಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ : RCB ಅಭಿಮಾನಿಗಳಿಗೆ ಬಿಗ್ ಶಾಕ್ | ಇನ್ಮುಂದೆ ಬೆಂಗಳೂರಲ್ಲಿ IPL ಪಂದ್ಯಗಳೇ ನಡೆಯಲ್ಲ!



















