ಬೆಂಗಳೂರು: ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ದುರುದ್ದೇಶದಿಂದ ನಾನು ಯಾವುದೇ ತಪ್ಪು ಮಾಡಿಲ್ಲ. ಇದನ್ನೆಲ್ಲ ಅವರು ರಾಜಕೀಯ ದ್ವೇಷದಿಂದ ಮಾಡುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ಮುಗಿಸಿದಂತಾಗುತ್ತದೆ ಎಂದು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಕ್ಕೆ ನಾನು ಮಾನಸಿಕವಾಗಿ ಕುಗ್ಗಿಲ್ಲ. ಏಕೆಂದರೆ ಕುಗ್ಗುವಂತಹ ತಪ್ಪು ನಾನು ಮಾಡಿಲ್ಲ. ನಾನು ಇನ್ನೂ ಸ್ಟ್ರಾಂಗ್ ಆಗಿದ್ದೇನೆ. ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಪ್ರಾಸಿಕ್ಯೂಷನ್ಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಬೆಂಗಳೂರಿಗೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬರುತ್ತಿದ್ದಾರೆ.
ನನ್ನ 40 ವರ್ಷದ ರಾಜಕೀಯ ಜೀವನ ತೆರೆದ ಪುಸ್ತಕ ಇದ್ದಂತೆ. ನನ್ನ ರಾಜಕೀಯ ಜೀವನದ ಪುಸ್ತಕದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ಯಾವತ್ತೂ ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ. ಅದಕ್ಕಾಗಿಯೇ ಅವರಿಗೆ ನನ್ನ ಪ್ರಾಮಾಣಿಕತೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯವರು ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಬಡವರ ಪರ ಇರುವುದಕ್ಕೆ ಬಿಜೆಪಿಗೆ ಭಯ. ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೀನಿ ಅದಕ್ಕೆ ಅವರಿಗೆ ಭಯ. ಸಿದ್ದರಾಮಯ್ಯನ ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ನ್ನು ಮುಗಿಸಬಹುದು ಎಂಬ ಭ್ರಮೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಇದೆ ಎಂದು ಆರೋಪಿಸಿದ್ದಾರೆ.