ಬೆಂಗಳೂರು/ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಭಾರತದೊಂದಿಗೆ ತಮಗಿರುವ ವಿಶೇಷ ಮತ್ತು ವೈಯಕ್ತಿಕ ನಂಟನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಮೂಲದ ಉದ್ಯಮಿ ಹಾಗೂ ಝರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ ಮಸ್ಕ್, ತಮ್ಮ ಸಂಗಾತಿ ಅರ್ಧ ಭಾರತೀಯ ಮೂಲದವರು ಮತ್ತು ತಮ್ಮ ಮಗನಿಗೆ ಭಾರತೀಯ ವಿಜ್ಞಾನಿಯ ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
“ನನ್ನ ಪಾರ್ಟ್ನರ್ ಶಿವಾನ್ ಅರ್ಧ ಭಾರತೀಯಳು”
ನಿಖಿಲ್ ಕಾಮತ್ ಅವರ “ಡಬ್ಲ್ಯುಟಿಎಫ್ ಈಸ್?” (WTF is?) ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮಸ್ಕ್, ನ್ಯೂರಾಲಿಂಕ್ ನಿರ್ದೇಶಕಿ ಹಾಗೂ ತಮ್ಮ ಮಕ್ಕಳ ತಾಯಿ ಶಿವಾನ್ ಜಿಲಿಸ್ ಅವರ ಹಿನ್ನೆಲೆಯ ಬಗ್ಗೆ ಮಾತನಾಡಿದರು. “ನನ್ನ ಪಾರ್ಟ್ನರ್ ಶಿವಾನ್ ಅರ್ಧ ಭಾರತೀಯಳು ಎಂಬುದು ನಿಮಗೆ ತಿಳಿದಿದೆಯೇ?” ಎಂದು ಮಸ್ಕ್ ಕೇಳಿದಾಗ, ನಿಖಿಲ್ ಕಾಮತ್ ತಮಗೆ ಈ ವಿಷಯ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಶಿವಾನ್ ಅವರ ತಂದೆ-ತಾಯಿ ಬಗ್ಗೆ ವಿವರಿಸಿದ ಮಸ್ಕ್, “ಅವರು ಕೆನಡಾದಲ್ಲಿ ಬೆಳೆದರು, ಆದರೆ ಅವರ ತಂದೆ ಬಹುಶಃ ಎಕ್ಸ್‌ಚೇಂಜ್ ಸ್ಟೂಡೆಂಟ್ ಆಗಿದ್ದರು ಎಂದುಕೊಳ್ಳುತ್ತೇನೆ. ಶಿವಾನ್ ಅವರನ್ನು ಮಗುವಾಗಿದ್ದಾಗಲೇ ದತ್ತು ನೀಡಲಾಗಿತ್ತು. ಹೀಗಾಗಿ ಅವರು ಕೆನಡಾದಲ್ಲಿ ಬೆಳೆದರು,” ಎಂದು ಅವರ ಹಿನ್ನೆಲೆಯ ಬಗ್ಗೆ ಬೆಳಕು ಚೆಲ್ಲಿದರು.

ಮಗನಿಗೆ ‘ಶೇಖರ್’ ಎಂದು ಹೆಸರಿಟ್ಟ ಮಸ್ಕ್!
ಕೇವಲ ಸಂಗಾತಿಯಷ್ಟೇ ಅಲ್ಲ, ತಮ್ಮ ಮಗನಿಗೂ ಭಾರತದ ನಂಟಿದೆ ಎಂದು ಮಸ್ಕ್ ಹೆಮ್ಮೆಯಿಂದ ಹೇಳಿಕೊಂಡರು. “ಶಿವಾನ್ ಜೊತೆಗಿನ ನನ್ನ ಗಂಡು ಮಕ್ಕಳಲ್ಲೊಬ್ಬನಿಗೆ ಮಧ್ಯದ ಹೆಸರನ್ನು ‘ಶೇಖರ್’ (Sekhar) ಎಂದು ಹೆಸರಿಟ್ಟಿದ್ದೇವೆ. ಈ ಹೆಸರು ಭಾರತದ ಹೆಮ್ಮೆಯ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಗೌರವಾರ್ಥ ಇಡಲಾಗಿದೆ,” ಎಂದು ಮಸ್ಕ್ ವಿವರಿಸಿದರು.
ಯಾರು ಈ ಶಿವಾನ್ ಜಿಲಿಸ್?
ಮಸ್ಕ್ ಅವರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಂಪನಿ ನ್ಯೂರಾಲಿಂಕ್‌ನಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಶಿವಾನ್ ಜಿಲಿಸ್, 2017ರಲ್ಲಿ ಕಂಪನಿಯನ್ನು ಸೇರಿದ್ದರು. ಯೇಲ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರು, ಎಲಾನ್ ಮಸ್ಕ್ ಅವರೊಂದಿಗೆ ಸ್ಟ್ರೈಡರ್, ಅಜೂರ್, ಅರ್ಕಾಡಿಯಾ ಮತ್ತು ಸೆಲ್ಡನ್ ಲೈಕರ್ಗಸ್ ಎಂಬ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.
ಅಮೆರಿಕದ ಪ್ರಗತಿಯಲ್ಲಿ ಭಾರತೀಯರ ಪಾತ್ರ:
ಪಾಡ್‌ಕಾಸ್ಟ್‌ನಲ್ಲಿ ಭಾರತೀಯ ಪ್ರತಿಭೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಮಸ್ಕ್, “ಅಮೆರಿಕವು ಭಾರತೀಯ ಪ್ರತಿಭೆಗಳಿಂದ ಅಪಾರವಾಗಿ ಲಾಭ ಪಡೆದಿದೆ. ಇಲ್ಲಿನ ತಂತ್ರಜ್ಞಾನ ಮತ್ತು ಪ್ರಗತಿಯಲ್ಲಿ ಭಾರತೀಯರ ಕೊಡುಗೆ ದೊಡ್ಡದು,” ಎಂದು ಅಭಿಪ್ರಾಯಪಟ್ಟರು. ಆದರೆ ವೀಸಾ ನಿಯಮಗಳು ಮತ್ತು ನೀತಿಗಳ ಬದಲಾವಣೆಯಿಂದಾಗಿ ಈ ಪರಿಸ್ಥಿತಿ ಈಗ ಬದಲಾಗುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ : ನಾವು ಬದುಕ್ತಿರೋದು ರಿಯಾಲಿಟಿ ಅಲ್ಲ, ಸಿಮ್ಯುಲೇಷನ್ ಅಷ್ಟೇ | ಎಲನ್ ಮಸ್ಕ್ ಮಾತಿನ ಗುಟ್ಟೇನು?



















