ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ, “ಪ್ರಿನ್ಸ್” ಎಂದೇ ಖ್ಯಾತರಾಗಿರುವ ಮತ್ತು ಟೆಸ್ಟ್ ತಂಡದ ನೂತನ ನಾಯಕ ಶುಭಮನ್ ಗಿಲ್, ತಮ್ಮ ಕ್ರಿಕೆಟ್ ಬದುಕಿನ ಆದರ್ಶ ಪುರುಷರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೇ ತನಗೆ ಬಾಲ್ಯದಿಂದಲೂ ಸ್ಪೂರ್ತಿಯ ಸೆಲೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ರೋಹಿತ್ ಶರ್ಮಾ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ, ಭಾರತೀಯ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹೊತ್ತಿರುವ ಗಿಲ್, ತಮ್ಮ ಚೊಚ್ಚಲ ಸರಣಿಯಲ್ಲೇ ಯಶಸ್ಸು ಕಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕಠಿಣ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ಪ್ರಸ್ತುತ 2025ರ ಏಷ್ಯಾ ಕಪ್‌ನಲ್ಲಿ ಭಾರತ ತಂಡದ ಉಪನಾಯಕರಾಗಿರುವ ಗಿಲ್, ಏಕದಿನ ಕ್ರಿಕೆಟ್‌ನಲ್ಲೂ ಉಪನಾಯಕನ ಜವಾಬ್ದಾರಿ ಹೊರಲಿದ್ದಾರೆ.
ಆರಾಧ್ಯ ದೈವಗಳ ಬಗ್ಗೆ ಗಿಲ್ ಮಾತು
ಇತ್ತೀಚೆಗೆ ಆಪಲ್ ಮ್ಯೂಸಿಕ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ತಮ್ಮ ಕ್ರಿಕೆಟ್ ಜೀವನದ ಮೇಲೆ ಪ್ರಭಾವ ಬೀರಿದ ಇಬ್ಬರು ಆಟಗಾರರ ಬಗ್ಗೆ ಗೌರವದಿಂದ ಮಾತನಾಡಿದರು.
“ನನಗೆ ಕ್ರಿಕೆಟ್‌ನಲ್ಲಿ ಇಬ್ಬರು ಆರಾಧ್ಯ ದೈವಗಳಿದ್ದಾರೆ. ಮೊದಲನೆಯವರು, ನನ್ನ ತಂದೆಯ ನೆಚ್ಚಿನ ಆಟಗಾರರೂ ಆಗಿರುವ ಸಚಿನ್ ತೆಂಡೂಲ್ಕರ್. ನಾನು ಕ್ರಿಕೆಟ್‌ಗೆ ಬರಲು ಅವರೇ ಕಾರಣ. ಅವರು 2013ರಲ್ಲಿ ನಿವೃತ್ತರಾದರು. 2011-13ರ ಅವಧಿಯಲ್ಲಿ ನಾನು ಕ್ರಿಕೆಟ್‌ನ ಕೌಶಲ್ಯಗಳ ಜೊತೆಗೆ, ಆಟದ ಮಾನಸಿಕ ಮತ್ತು ತಾಂತ್ರಿಕ ಭಾಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ,” ಎಂದು ಗಿಲ್ ಹೇಳಿದರು.
ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿದ ಅವರು, “ಅದೇ ಸಮಯದಲ್ಲಿ (2011-13) ನಾನು ವಿರಾಟ್ ಕೊಹ್ಲಿ ಅವರನ್ನು ಹತ್ತಿರದಿಂದ ಅನುಸರಿಸಲು ಪ್ರಾರಂಭಿಸಿದೆ. ಆಟದ ಬಗ್ಗೆ ಅವರಿಗಿದ್ದ ಅಪಾರ ಉತ್ಸಾಹ, ಅವರ ಹಸಿವು ಮತ್ತು ಅವರ ಆಟದ ಶೈಲಿ ನನಗೆ ತುಂಬಾ ಇಷ್ಟವಾಯಿತು. ನೀವು ಎಲ್ಲಾ ಕೌಶಲ್ಯ ಮತ್ತು ತಂತ್ರಗಳನ್ನು ಕಲಿಯಬಹುದು, ಆದರೆ ‘ಹಸಿವು’ ಎಂಬುದು ನಿಮ್ಮೊಳಗೆ ಇರಬೇಕು ಅಥವಾ ಇರುವುದಿಲ್ಲ. ವಿರಾಟ್ ಅವರಲ್ಲಿ ಅದು ಹೇರಳವಾಗಿತ್ತು ಮತ್ತು ಅದು ನನಗೆ ನಿಜವಾಗಿಯೂ ಸ್ಫೂರ್ತಿ ನೀಡಿತು,” ಎಂದು ಭಾರತದ ಟೆಸ್ಟ್ ನಾಯಕ ತಿಳಿಸಿದ್ದಾರೆ.
ಸಚಿನ್ ಅವರ ಆಟವನ್ನು ನೋಡಿ ಕ್ರಿಕೆಟ್‌ಗೆ ಬಂದ ಗಿಲ್, ವಿರಾಟ್ ಕೊಹ್ಲಿಯವರ ಆಟದ ಹಸಿವು ಮತ್ತು ಉತ್ಸಾಹದಿಂದ ಪ್ರೇರಿತರಾಗಿ, ಇಂದು ಭಾರತೀಯ ಕ್ರಿಕೆಟ್‌ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ.