ಬೆಂಗಳೂರು: ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ಹೀಗಾಗಿ ಇನ್ನು ಎಂಟತ್ತು ವರ್ಷ ನಾನು ರಾಜಕೀಯದಲ್ಲಿ ಇರುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಮಾವೇಶದಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೇವೆ. ಅದರಂತೆ ಅದನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ ಸ್ವಲ್ಪ ತಾಳ್ಮೆಯಿರಲಿ” ಎಂದು ಹೇಳಿದ್ದಾರೆ.
ನಾನು ವಿಧಾನಸೌಧದಲ್ಲಿ ಇದ್ದೇ ಇರುತ್ತೇನೆ. ನಾನು ಇನ್ನು ಎಂಟತ್ತು ವರ್ಷ ರಾಜಕಾರಣ ಬಿಟ್ಟು ಹೋಗುವುದಿಲ್ಲ. ನಿಮ್ಮ ಭರವಸೆಗಳನ್ನೆಲ್ಲ ನಾನು ಈಡೇರಿಸಲು ಪ್ರಯತ್ನಿಸುತ್ತೇನೆ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ ಎಂದ ಡಿಕೆಡಿ ಹೇಳಿದ್ದಾರೆ.
ಗ್ಯಾರಂಟಿ ಬಗ್ಗೆ ಮಾತನಾಡಿದ ಅವರು, ನಾವು 2 ಸಾವಿರ ಕೊಡುತ್ತೇವೆ ಅಂತ ಹೇಳಿದ್ದೇವೆ. ಆದರೆ, ತಿಂಗಳು ತಿಂಗಳು ಕೊಡುತ್ತೇವೆ ಅಂತಾ ಹೇಳಿಲ್ಲ. 2000 ಕೊಡುತ್ತೇವೆ ಅಂತಾ ಹೇಳಿದ್ದೇವೆ. ಅದು ಸಂಗ್ರಹವಾಗಬೇಕು. ನೀವು ನಮ್ಮ ಅಕೌಂಟ್ ಗೆ ಹಾಕಿದರೆ, ನಾವು ಅದನ್ನು ಸಂಗ್ರಹಿಸಿ ಫಲಾನುಭವಿಗಳ ಅಕೌಂಟ್ ಗೆ ಹಾಕುತ್ತೇವೆ ಎಂದು ಪರೋಕ್ಷವಾಗಿ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ.
ಗೃಹಲಕ್ಷ್ಮೀ ಅನ್ನಭಾಗ್ಯ ಅಕ್ಕಿ ಯೋಜನೆಗೆ ಅನುದಾನ ಕೊರತೆಯಾಗುತ್ತಿರುವ ಕುರಿತು ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗೆ ಹಣ ಕೊಡಲು ಅನುದಾನದ ಕೊರತೆಯಾಗುತ್ತಿದೆ. 4 ಕೋಟಿ ಜನರಿಗೆ ಸಹಾಯ ಮಾಡುವ ಗ್ಯಾರಂಟಿ ಕೊಟ್ಟಿದ್ದೇವೆ. ನನ್ನ ಅಧ್ಯಕ್ಷತೆಯಲ್ಲೇ ಗ್ಯಾರಂಟಿ ಘೋಷಿಸಿದ್ದೇವೆ. ಬಿಜೆಪಿ ಅವಧಿಯಲ್ಲಿ ಬೆಲೆ ಏರಿಕೆ ಹೆಚ್ಚಾಯಿತು. ಆದಾಯ ಪಾತಾಳ ಸೇರಿತು. ಅದಕ್ಕಾಗಿಯೇ ನಾವು 2 ಸಾವಿರ ಘೋಷಣೆ ಮಾಡಿದ್ದೇವೆ. ಆದರೆ, ಇದನ್ನೇ ತಪ್ಪಾಗಿ ತಿಳಿದುಕೊಂಡು ವಿರೋಧಿಗಳು ಅತ್ತೆ-ಸೊಸೆಗೆ ಜಗಳ ತಂದಿಟ್ಟರು ಅಂತಾ ಮಾತನಾಡಿದ್ದಾರೆ. ಆದರೆ ನಾವು ಜಗಳ ತಂದಿಟ್ಟಿದ್ದೇವಾ? ಎಂದು ಪ್ರಶ್ನಿಸಿದ್ದಾರೆ.