ಹಾಸನ: ಅಣ್ಣ- ತಮ್ಮಂದಿರಿಬ್ಬರ ಜಿದ್ದಿಗೆ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೊಲೆಯಾಗಿದ್ದ. ಆದರೆ, 13 ವರ್ಷದ ನಂತರ ಬಡಪಾಯಿಯ ಮಕ್ಕಳು ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ.
ತನ್ನ ತಮ್ಮನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕೆಂಬ ಕಾರಣಕ್ಕೆ ಅಣ್ಣನೊಬ್ಬ ಆತನ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಲಕ್ಕಪ್ಪ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ. ನಂತರ ಹೆಣವನ್ನು ತಮ್ಮನ ಮನೆಯ ಕಂಪೌಂಡ್ ಒಳಗೆ ಬಿಸಾಡಿ ಪರಾರಿಯಾಗಿದ್ದ. ಆದರೆ, ಆನಂತರ ತನಿಖೆ ಕೈಗೊಂಡ ಪೊಲೀಸರು, ಅಣ್ಣನೇ ಈ ಕೃತ್ಯ ಎಸಗಿದ ಆರೋಪಿ ಎಂಬುವುದನ್ನು ಪತ್ತೆ ಹಚ್ಚಿದ್ದರು.
ಈ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಆನಂತರ ಆರೋಪಿ ನಿರ್ವಾಣಪ್ಪ (75) ಎಂಬಾತನನ್ನು ಪತ್ತೆ ಹಚ್ಚಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 7 ವರ್ಷ ಜೈಲು ಶಿಕ್ಷೆಯಾಗಿತ್ತು. ಇತ್ತೀಚೆಗೆ ಶಿಕ್ಷೆ ಮುಗಿಸಿ ಆರೋಪಿ ಬಂದಿದ್ದ. ಆದರೆ, ಕೊಲೆಯಾಗಿದ್ದ ಕೂಲಿ ಕಾರ್ಮಿಕ ಲಕ್ಕಪ್ಪನ ಮಕ್ಕಳು, ನಿರ್ವಾಣಪ್ಪನನ್ನು ಕೊಲೆ ಮಾಡಿದ್ದಾರೆ. ಬರೋಬ್ಬರಿ 13 ವರ್ಷಗಳ ನಂತರ ತಂದೆಯ ಸೇಡಿಗೆ ಮಗನೊಬ್ಬ ಸೇಡು ತೀರಿಸಿಕೊಂಡಿದ್ದಾನೆ. ಈ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.