ಹಾವೇರಿ: ಜಿಲ್ಲೆಯಲ್ಲಿ ನಡೆದ ಹಿಂದೂ ಯುವತಿಯ ಹತ್ಯೆ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮದುವೆಗೆ ನಿರಾಕರಿಸಿದ ಯುವಕನನ್ನು ಯುವತಿ ತರಾಟೆಗೆ ತೆಗೆದುಕೊಂಡಿದ್ದು, ಕೋಪಗೊಂಡ ಯುವಕ ಆತನ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ನಡೆದ ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣ ರಾಜ್ಯದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿತ್ತು. ಮಾ. 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಯು.ಡಿ.ಆರ್ ದಾಖಲಿಸಿಕೊಂಡು ಹಲಗೇರಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರುವುದು ತಿಳಿದು ಬಂದಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿತ್ತು.
ಸ್ವಾತಿಯನ್ನು ನಯಾಜ್ ಹಾಗೂ ವಿನಯ್, ದುರ್ಗಾಚಾರಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸೋ ಸ್ಪರ್ಧೆಯ ಅಭಿಮಾನಿಗಳಾಗಿದ್ದರು. ಹೋರಿ ಬೆದರಿಸೋ ಸ್ಪರ್ಧೆ ಇದ್ದಲಿಗೆ ಸ್ವಾತಿ ಕೂಡ ಹೋಗುತ್ತಿದ್ದಳು. ಈ ವೇಳೆ ನಯಾಜ್, ವಿನಯ್, ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ.
ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇತ್ತೀಚೆಗೆ ನಯಾಜ್, ಸ್ವಾತಿ ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಮುಂದಾಗಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ವಾತಿ ಜಗಳವಾಡಿದ್ದಾಳೆ. ಈ ಜಗಳ ದೊಡ್ಡದಾಗುತ್ತಿದ್ದಂತೆ ಕೊಲೆ ಮಾಡಲು ಮುಂದಾಗಿದ್ದಾನೆ.
ಮಾ. 3ರಂದು ಆರೋಪಿಗಳು ಸ್ವಾತಿಗೆ ಫೋನ್ ಮಾಡಿ ಬರ ಹೇಳಿದ್ದಾರೆ. ಬಾಡಿಗೆ ಕಾರು ಮಾಡಿಕೊಂಡು ಬಂದು ಕಾರಿನಲ್ಲಿ ಕರೆದೊಯ್ದಿದ್ದಾರೆ. ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದರು. ಬಾಡಿಗೆ ಕಾರಿನಲ್ಲಿ ರಟ್ಟಿಹಳ್ಳಿ ಬಳಿ ಇರುವ ಕಬ್ಬಿಣಕಂತಿ ಮಠದ ಬಳಿ ಪಾಳು ಬಿದ್ದಿರುವ ತರಳಬಾಳು ಶಾಲೆಗೆ ಕರೆದೊಯ್ದು ಕುತ್ತಿಗೆಗೆ ಟವಲ್ ಹಾಕಿ ಉರುಳು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆನಂತರ ಕಾರಿನಲ್ಲಿ ಶವ ಸಾಗಿಸಿ, ತುಂಗಭದ್ರಾ ನದಿಗೆ ಶವ ಬಿಸಾಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸದ್ಯ ಆರೋಪಿ ನಯಾಜ್ ನನ್ನು ಬಂಧಿಸಿದ್ದು, ವಿನಯ್ ಹಾಗೂ ದುರ್ಗಾಚಾರಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.