ತುಮಕೂರು: ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ತಿಪಟೂರು ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ತಿಪಟೂರು ತಾಲೂಕಿನ ಈಡೇನಹಳ್ಳಿ ಪಾಳ್ಯ ನಿವಾಸಿ ಎನ್.ಚೇತನ್ (35) ಎಂಬಾತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯ ಶವ ಹಾಲ್ಕುರಿಕೆ ರಸ್ತೆಯ ಧನಲಕ್ಷ್ಮಿ ಕೋಕೋ ನೆಟ್ ಫ್ಯಾಕ್ಟರಿ ಹತ್ತಿರ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾಗಿರುವ ಚೇತನ್ ತಿಪಟೂರು ನಗರದಲ್ಲಿ ವಾಸಿಸುತ್ತಿದ್ದ. ಈತನಿಗೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಕೌಟುಂಬಿಕ ಕಲಹದಿಂದ ದಂಪತಿ ದೂರವಾಗಿತ್ತು. ಈತ ಸ್ವಂತ ಲಾರಿ ಇಟ್ಟುಕೊಂಡು ತೆಂಗಿನಕಾಯಿ ಸರಬರಾಜು ಮಾಡುತ್ತಿದ್ದ.
ಇತ್ತೀಚೆಗೆ ಆಲೂರು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆಯಾಗಲು ಕೂಡ ಮುಂದಾಗಿದ್ದ. ಶನಿವಾರ ಕುಡಿದ ಮತ್ತಿನಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿಯ ಮನೆಗೆ ಹೋಗಿ ಮಗಳನ್ನು ಮದುವೆಯಾಗುತ್ತೇನೆ, ಮದುವೆ ಮಾಡಿ ಕೊಡಿ ಎಂದು ಕೇಳಿದ್ದಾನೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.