ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಶನಿವಾರ 25 ವರ್ಷದ ವೈದ್ಯೆಯೊಬ್ಬರು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ತೋಳಿನ ಮೇಲೆ ಸೂಜಿಯಲ್ಲಿ ಚುಚ್ಚಿರುವ ಗುರುತುಗಳು ಪತ್ತೆಯಾಗಿವೆ. ಮೃತ ಮಹಿಳೆಯನ್ನು ರಿಚಾ ಪಾಂಡೆ ಎಂದು ಗುರುತಿಸಲಾಗಿದೆ. ಇವರು ಮೂಲತಃ ಉತ್ತರಪ್ರದೇಶದ ಲಕ್ನೋದವರಾಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಭೋಪಾಲ್ ಮೂಲದ ದಂತವೈದ್ಯ ಡಾ. ಅಭಿಜೀತ್ ಪಾಂಡೆ ಎಂಬವರನ್ನು ವಿವಾಹವಾಗಿದ್ದರು.
ಡಾ.ರಿಚಾ(25) ಅವರು ಭೋಪಾಲ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರೆ, ಅವರ ಪತಿ ಡಾ.ಅಭಿಜೀತ್ ಪಾಂಡೆ ದಂತವೈದ್ಯಕೀಯ ಅಭ್ಯಾಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಲೋಕೇಂದ್ರ ಠಾಕೂರ್ ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ದಂಪತಿಗಳು ಗುರುವಾರ ರಾತ್ರಿ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದರು. ಶುಕ್ರವಾರ ಬೆಳಗ್ಗೆ, ಪತಿ ಅಭಿಜೀತ್ ಅವರು ಎದ್ದು ಡಾ.ರಿಚಾ ಅವರ ಕೊಠಡಿಯ ಬಾಗಿಲು ಬಡಿದಾಗ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಎಷ್ಟೇ ಬಡಿದರೂ ಬಾಗಿಲು ತೆರೆಯದ ಕಾರಣ, ಕೂಡಲೇ ಅಭಿಜೀತ್ ಅವರು ನೆರೆಹೊರೆಯವರ ಸಹಾಯ ಪಡೆದು, ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ, ಎಲ್ಲ ಪ್ರಯತ್ನಗಳೂ ವಿಫಲವಾದವು.
ಅಂತಿಮವಾಗಿ, ಮನೆ ಸಮೀಪದ ಮಾರುಕಟ್ಟೆಯಿಂದ ಕಾರ್ಮಿಕರೊಬ್ಬರನ್ನು ಕರೆಸಲಾಯಿತು. ಅವರು ಬಂದು ಬಾಗಿಲು ಒಡೆದಿದ್ದು, ಒಳಹೋಗಿ ನೋಡಿದಾಗ ರಿಚಾ ಅವರು ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ರಿಚಾ ಅವರ ಕೈಗಳಲ್ಲಿ ಚುಚ್ಚುಮದ್ದಿನ ಗುರುತುಗಳು ಕಂಡುಬಂದಿವೆ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣವನ್ನು ಖಚಿತಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಿಚಾ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಶನಿವಾರ ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.
ಕೊಲೆ ಆರೋಪ ಹೊರಿಸಿದ ರಿಚಾ ಹೆತ್ತವರು:
ಇದೇ ವೇಳೆ, ರಿಚಾ ಸಾವಿಗೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆಕೆಯ ಕುಟುಂಬ ಸದಸ್ಯರು, ನಮ್ಮ ಮಗಳನ್ನು ಅಳಿಯ ಅಭಿಜೀತ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ, ಅಭಿಜೀತ್ ಅವರು ಈ ಆರೋಪ ನಿರಾಕರಿಸಿದ್ದಾರೆ. ಸಾವಿಗೆ ಕಾರಣವೇನೆಂದು ನನಗೆ ಗೊತ್ತಿಲ್ಲ. ಅಲ್ಲದೆ ಆಕೆಯ ಕೊಠಡಿಯ ಬಾಗಿಲು ಒಳಗಿನಿಂದಲೇ ಲಾಕ್ ಆಗಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ. ರಿಚಾ ಅವರ ಕೈಯ್ಯಲ್ಲಿರುವ ಇಂಜೆಕ್ಷನ್ ಚುಚ್ಚಿರುವ ಗುರುತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.