ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ (Darshan) ನೋವಿನಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ. ಆ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಯೋಗ ಮತ್ತು ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿತ್ಯವೂ ಈಗ ಜೈಲಿನಲ್ಲಿ ಕೂತು ದರ್ಶನ್ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. ಜೊತೆಗೆ ಜೈಲರ್ ಗೆ ಮನವಿ ಮಾಡಿ ಅಲ್ಲೇ ಸಿಗುವ ಪುಸ್ತಕಗಳನ್ನು ಓದುತ್ತಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಸೇರಿ ಮೂರು ವಾರಗಳು ಕಳೆದಿವೆ. ಒಂದೊಂದು ದಿನವನ್ನೂ ಕಳೆಯಲು ದರ್ಶನ್ ಕಷ್ಟ ಪಡುತ್ತಿದ್ದಾರೆ.

ಆರೋಗ್ಯದಲ್ಲಿ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಿತ್ಯವೂ ಅವರ ತೂಕ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಜೈಲಿನ ಆಹಾರ ಕೂಡ ಅವರಿಗೆ ಒಗ್ಗುತ್ತಿಲ್ಲ. ಇದರಿಂದಾಗಿ ದರ್ಶನ್ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ.
ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮೊನ್ನೆಯಷ್ಟೇ ತನಗೆ ಮನೆ ಊಟ ಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಜುಲೈ 18ಕ್ಕೆ ನ್ಯಾಯಾಲಯ ಮುಂದೂಡಿದೆ.