ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದ್ದು, ಅಲ್ಲಿಯವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದರು. ಕೋರ್ಟ್ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇಂದು ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಶಾಸಕ ಮುನಿರತ್ನ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಾಳೆವರೆಗೂ ಮುನಿರತ್ನ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮುನಿರತ್ನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ‘ಇದೊಂದು ರಾಜಕೀಯ ಪ್ರೇರಿತ ವಿಷಯ. ತಿರುಪತಿಗೆ ಹೋಗುವಾಗ ಮುನಿರತ್ನರನ್ನು ಬಂಧಿಸಿ ಸುಪ್ರೀಂಕೋರ್ಟ್‌ನ ತೀರ್ಪು ಉಲ್ಲಂಘಿಸಲಾಗಿದೆ ಎಂದು ವಾದಿಸಿದರು. ಈ ವೇಳೆ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರು ಎರಡು ದಿನ ಸಮಯ ಕೇಳಿದರು. ನಾಳೆ ಆಕ್ಷೇಪಣೆ ಸಲ್ಲಿಸಿ ಎಂದು ಸೂಚಿಸಿದ ಕೋರ್ಟ್, ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಒಕ್ಕಲಿಗ ಸಚಿವರು, ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಆಗ ಮಾತನಾಡಿದ್ದ ಸಚಿವ ಚೆಲುವರಾಯಸ್ವಾಮಿ, ಒಕ್ಕಲಿಗ ಮಹಿಳೆಯರ ಬಗ್ಗೆ ಮುನಿರತ್ನ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೂ ಅಶೋಕ್, ಸಿ.ಟಿ ರವಿ, ಕುಮಾರಸ್ವಾಮಿ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.