ಬೆಂಗಳೂರು: ಶಾಸಕ (BJP MLA) ಮುನಿರತ್ನ (Munirathna) ಮೇಲೆ ನಡೆದ ಮೊಟ್ಟೆ ದಾಳಿ (Egg Attack)ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಕುಸುಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ನಡೆಯುತ್ತಿದ್ದಂತೆ ಶಾಸಕ ಮುನಿರತ್ನ, ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಡಿಕೆ ಸುರೇಶ್ (DK Suresh) ಹಾಗೂ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ (kusuma hanumantharayappa) ಈ ಕೃತ್ಯದ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಟಾಂಗ್ ನೀಡಿರುವ ಕುಸುಮಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
’ನಾನು ಕುಸುಮ, ಇಂಜಿನಿಯರಿಂಗ್ ಹಾಗೂ ಎಂಎಸ್ ಸ್ನಾತಕೋತ್ತರ ಪದವೀಧರೆ, ಪ್ರಾಧ್ಯಾಪಕಿಯ ವೃತ್ತಿಯಲ್ಲಿದ್ದು, ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಮಾಗಡಿ ಮೂಲದವರಾದ ನನ್ನ ತಾತ ಹನುಮೇಗೌಡ ಹಾಗೂ ಅಜ್ಜಿ ಪುಟ್ಟಮ್ಮ ಕೃಷಿಕರು. ಮಲ್ಲತ್ತಹಳ್ಳಿ ಮೂಲದ ಮತ್ತೊಬ್ಬ ತಾತ ಕೆಂಪಯ್ಯ ಮತ್ತು ಅಜ್ಜಿ ಗಂಗಮ್ಮ ಕೂಡ ಕೃಷಿಕರು. ನನ್ನ ತಂದೆ ಹನುಮಂತರಾಯಪ್ಪ ಬಿಎಂಟಿಸಿಯಲ್ಲಿ ಕಂಡಕ್ಟರ್ ವೃತ್ತಿಯಲ್ಲಿದ್ದವರು ಸ್ವಯಂನಿವೃತ್ತಿಯ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ಭೈರಮ್ಮ ಗೃಹಿಣಿ. ನನ್ನ ತಂಗಿ ಎಂಬಿಎ ಪದವೀಧರೆ.
ಸಹೋದರ ಕೂಡ ಲಂಡನ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಕಾನೂನು ಪದವೀಧರ. ನನ್ನ ಹಿನ್ನೆಲೆ ಬಗ್ಗೆ ಮಾತನಾಡುವವರು ಒಮ್ಮೆ ಕಣ್ತೆರೆದು ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಹತ್ತು ಅಂಶಗಳ ಪಾಯಿಂಟ್ ಮೂಲಕ ಮುನಿರತ್ನಗೆ ಟಾಂಗ್ ಕೊಟ್ಟಿದ್ದಾರೆ. 1. ನಮ್ಮ ಕುಟುಂಬದಲ್ಲಿ ಯಾರೂ ಕೂಡ ಕ್ರಿಮಿನಲ್ ಹಿನ್ನಲೆಯುಳ್ಳವರಿಲ್ಲ., 2. ಯಾರೂ ಕೂಡ ಜಾತಿ ನಿಂದನೆ ಮಾಡಿಲ್ಲ., 3. ನನ್ನ ಕುಟುಂಬದ ಯಾರೊಬ್ಬರೂ ಕೂಡ ಹೆಣ್ಣುಮಕ್ಕಳ ಅವಹೇಳನ ಮಾಡಿಲ್ಲ., 4. ನನ್ನ ಕುಟುಂಬದ ಯಾವೊಬ್ಬ ಸದಸ್ಯರೂ ರೇಪ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿಲ್ಲ., 5. ನನ್ನ ಕುಟುಂಬದ ಯಾರೊಬ್ಬರೂ ಕಳ್ಳ ಬಿಲ್ ಮಾಡಿಸಿಕೊಂಡ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿಲ್ಲ., 6. ನಾನು ದಲಿತರ ಬಗ್ಗೆ ಯಾವುದೇ ರೀತಿಯ ತುಚ್ಚ ಮಾತುಗಳನ್ನು ಎಂದಿಗೂ ಆಡಿಲ್ಲ., 7. ನಮ್ಮ ಕುಟುಂಬದ ಯಾರೊಬ್ಬರೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರಲಿಲ್ಲ., 8. ನನ್ನ ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ ಯಾವ ಅಧಿಕಾರಿಗಳ ಅಮಾನತಿಗೆ ನಾನು ಕಾರಣಳಾಗಿಲ್ಲ., 9. ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದು ಹಣ ನೀಡುವಂತೆ ಹೆದರಿಸಲಿಲ್ಲ., 10. ಹೆಚ್ಚಿನದಾಗಿ ನನ್ನ ಸಹೋದರನ ವೃತ್ತಿ ವಕೀಲಿಕೆ ನೆನಪಿರಲಿ, ಆತ ಯಾವುದೇ ರೌಡಿ ಶೀಟರ್ ಅಲ್ಲ., ನನ್ನ ಬಗ್ಗೆ ಆಧಾರರಹಿತವಾಗಿ ಮಾತನಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.