ಬೆಂಗಳೂರು: ಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಾಸಕ ಮುನಿರತ್ನ ಜಾಮೀನಿನ ಮೇಲೆ ಹೊರ ಬಂದ ನಂತರ ಮೊದಲ ಬಾರಿಗೆ ಬಿಜೆಪಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮುನಿರತ್ನ ಅವರಿಗೆ ಇತ್ತೀಚೆಗೆ ಜಾಮೀನು ಸಿಕ್ಕಿತ್ತು. ಆದರೂ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಶುಕ್ರವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ವಕ್ಫ್ ವಿರೋಧಿ ಪ್ರತಿಭಟನೆಯಲ್ಲಿ ಮೊದಲ ಬಾರಿಗೆ ಕಾಣಸಿಕೊಂಡಿದ್ದರು.
ಈ ವೇಳೆ ಮಾತನಾಡಿದ ಅವರು, ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್, ನಿಜಾಮ ಎಲ್ಲೆಲ್ಲಿ ಕೈ ಮುಟ್ಟಿದ್ದಾರೆ ಅದು ನಮ್ಮದೆಂದು ಹೇಳುವ ದಿನ ಮುಂದೆ ಬರಲಿದೆ. ನಮ್ಮ ದೇವಸ್ಥಾನಗಳಿಗೆ ಪಹಣಿ ಸಿದ್ಧವಾಗುತ್ತಿದೆ. ಮುಂದಿನ ಐವತ್ತು, ನೂರು ವರ್ಷಗಳಲ್ಲಿ ನಮಗಾಗುತ್ತದೆ ಎಂಬ ಉದ್ದೇಶದಲ್ಲಿ ಪಹಣಿ ಮಾಡಲಾಗುತ್ತಿದೆ. ಒಮ್ಮೆ ಪಹಣಿ ಬಂದ ನಂತರ ಬದಲಾವಣೆ ಅಸಾಧ್ಯ ಎಂದು ಗುಡುಗಿದ್ದಾರೆ.
ಈ ವೇಳೆ ಡಿಕೆಶಿ ವಿರುದ್ಧ ಪರೋಕ್ಷವಾಗಿ ಗುಡುಗಿದ ಮುನಿರತ್ನ, ತಗ್ಗಿ ಬಗ್ಗಿ ನಡೆದಿಲ್ಲ ಎಂಬ ಕಾರಣಕ್ಕಾಗಿ ನಿನಗೆ ಅನುದಾನ ಸಿಕ್ಕಿಲ್ಲ. ನಾನು ಕಾಲು ಹಿಡಿದುಕೊಂಡಿದ್ದೇನೆ. ನನಗೆ ಅನುದಾನವನ್ನೇ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.