ಬೆಂಗಳೂರು: ಶಾಸಕ ಮುನಿರತ್ನ ಮತ್ತೊಮ್ಮೆ ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ಹಾಗೂ ಡಿ.ಕೆ. ಸುರೇಶ್(DK Suresh) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವರ್ಲ್ಡ್ ಬ್ಯಾಂಕ್ ಲೋನ್ ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಅಕ್ರಮ ಹಾಗೂ 400 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ (Thawar Chand Gehlot) ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಜಾಕಾಲುವೆ ಕಾಮಗಾರಿಗಳ ಟೆಂಡರ್ ಗಳಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ. ವರ್ಲ್ಡ್ ಬ್ಯಾಂಕ್ ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು, ಸ್ಟಾರ್ ಇನ್ಫ್ರಾಟೆಕ್, ರಾಮಲಿಂಗಂ ಕನ್‌ಸ್ಟ್ರಕ್ಷನ್, ತಿರುಮಲ ಗಿರಿ ಕನ್‌ಸ್ಟ್ರಕ್ಷನ್, ಆರ್‌ಎನ್‌ಎಸ್ ಕನ್‌ಸ್ಟ್ರಕ್ಷನ್ ಹಾಗೂ ಬಿಎಸ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿಗಳಿಂದ ದೊಡ್ಡ ಮೊತ್ತದ ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
16 ವರ್ಕ್ ಆರ್ಡರ್‌ಗಳನ್ನು ಈ ಕಂಪನಿಗಳ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿದ್ದಾರೆ. ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ದೊಡ್ಡ ದೊಡ್ಡ ಕಂಪನಿಗಳಿಂದ 400 ಕೋಟಿ ರೂ. ಕಮಿಷನ್ ಪಡೆದು ಟೆಂಡರ್ ಕೊಟ್ಟಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಇದರ ಹಿಂದೆ ಇದ್ದಾರೆ.
ವರ್ಲ್ಡ್ ಬ್ಯಾಂಕ್ ಲೋನ್‌ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಕಳೆದ ಫೆಬ್ರವರಿಯಲ್ಲಿ ನಾನು ಇಡಿಗೆ ದೂರು ಕೊಟ್ಟಿದ್ದೆ. ಗುತ್ತಿಗೆದಾರರ ಜೊತೆ ಶಾಮೀಲಾಗಿ 2 ಸಾವಿರ ಕೋಟಿ ರೂ. ಅಕ್ರಮ ಮಾಡುತ್ತಿದ್ದಾರೆ. 400 ಕೋಟಿ ರೂ. ಕಮಿಷನ್ ಪಡೆಯುತ್ತಾರೆ. ಇದನ್ನು ತಡೆಗಟ್ಟಿದರೆ ಸರ್ಕಾರಕ್ಕೆ 400 ಕೋಟಿ ರೂ. ಉಳಿಯಲಿದೆ ಎಂದು ಆರೋಪಿಸಿದ್ದಾರೆ.