ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಮಾಡಿದ್ದಾರೆ.
ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ಈ ಕುರಿತು ದೂರು ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಚಲುವರಾಜು, ಶಾಸಕ ಮುನಿರತ್ನ ಕರೆದು ಬೆದರಿಕೆ ಹಾಕಿ 20 ಲಕ್ಷ ರೂ. ಹಣ ಕೇಳಿದ್ದರು. ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ. ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ ನೋಡು.
ರೇಣುಕಾಸ್ವಾಮಿಗೆ ಗತಿ ಕಾಣಿಸಿದ್ದು ನಮ್ಮ ಅಕ್ಕನ ಮಗ ಎಂದು ಆವಾಜ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಬಿಬಿಎಂಪಿಯಿಂದ ನಡೆಸಿದ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತು ಟೆಂಡರ್ ಪಡೆದಿದ್ದೇನೆ. ಹೀಗಾಗಿ ನಗರದ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 42. ಲಕ್ಷ್ಮಿದೇವಿನಗರ ವಾರ್ಡ್ ನಲ್ಲಿ ಡಿ. ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕೆಲಸ ಮಾಡುತ್ತಿದ್ದೇನೆ.
ಆದರೆ, ಸೆ. 9ರಂದು ಹಣ ವಸೂಲಿ ವಿಚಾರವಾಗಿ ಮುನಿರತ್ನ ಅವರ ಆಪ್ತನಾದ ವಸಂತ್ ಕುಮಾರ್ ಆಕಸ್ಮಿಕವಾಗಿ ಸಿಕ್ಕು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಹಾಗೂ ಮುನಿರತ್ನ ಅವರನ್ನು ಲೋಕಾಯುಕ್ತಕ್ಕೆ ಹಿಡಿದುಕೊಡಲು ಪ್ಲಾನ್ ಮಾಡಿರುವುದು ನಮಗೆ ಗೊತ್ತಾಗಿದೆ. ನಿನ್ನನ್ನು ಸುಮ್ಮನೆ ಬಿಡಲ್ಲ, ರೇಣುಕಾಸ್ವಾಮಿ ಕತೆ ನಿನಗೂ ಆಗುತ್ತೆ ಎಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.