ಮುಂಬಯಿ: ಭಾರತ ಕ್ರಿಕೆಟ್ ಕ್ಷೇತ್ರದ ಐತಿಹಾಸಿಕ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ ((Wankhede Stadium) ) ಹೊಸ ದಾಖಲೆಯೊಂದನ್ನು ನಿರ್ಮಿಸಿದೆ. ತನ್ನ 50 ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ವಾಂಖೆಡೆಯಲ್ಲಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಕ್ರಿಕೆಟ್ ಚೆಂಡಗಳ ಮೂಲಕ ದೀರ್ಘ ವಾಕ್ಯವೊಂದನ್ನು ರಚಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಈ ದಾಖಲೆಗಾಗಿ 14,505 ಕೆಂಪು ಮತ್ತು ಬಿಳಿ ಬಣದ ಚೆಂಡನ್ನು ಬಳಸಲಾಗಿದೆ.
ಚೆಂಡುಗಳ ಮೂಲಕ ‘ಫಿಫ್ಟಿ ಇಯರ್ಸ್ ಆಫ್ ವಾಂಖೆಡೆ ಸ್ಟೇಡಿಯಮ್’ ಎಂದು ಬರೆಯಲಾಗಿದೆ. ಈ ಸ್ಟೇಡಿಯಂಗೆ 50 ವರ್ಷ ತುಂಬಿದ ಸಂಭ್ರಮಾಚರಣೆಯ ಭಾಗವಾಗಿ ಏರ್ಪಡಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಲಾಗಿದೆ.
‘ಇದುವರೆಗೂ ಯಾರೂ ಮಾಡದಂತಹ ವಿಶೇಷ ಸಾಧನೆ ಮಾಡಿರುವ ಹೆಮ್ಮೆ ನಮಗಿದೆ. ಬಳಸಲಾದ ಚೆಂಡುಗಳನ್ನು ಸ್ಥಳೀಯ ಶಾಲೆ, ಕ್ಲಬ್, ಉದಯೋನ್ಮುಖ ಕ್ರಿಕೆಟಿಗರಿಗೆ ನೀಡಲಾಗುವುದು. ಈ ಮೂಲಕ ಅವರಿಗೆ ಕ್ರಿಕೆಟ್ ರಂಗದಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸಲಾಗುವುದು ಎಂದು’ ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.

ನವೀಕರಣಗೊಂಡಿದೆ ಸ್ಟೇಡಿಯಮ್
2011ರ ವಿಶ್ವಕಪ್ ಟೂರ್ನಿಯ ಭಾಗವಾಗಿ ವಾಂಖೇಡೆ ಸ್ಟೇಡಿಯಂನ ನವೀಕರಣ ಮಾಡಲಾಯಿತು. ಈ ವೇಳೆ 45 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದ ಮೈದಾನವನ್ನು 33 ಸಾವಿರಕ್ಕೆ ಇಳಿಸಲಾಯಿತು. ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಾಗಲೂ ಈ ಸ್ಟೇಡಿಯಂಗೆ ಬಂದು ಫೋಟೂಶೂಟ್ ಮಾಡುವುದು ವಾಡಿಕೆ.1983ರಲ್ಲಿ ಕಪಿಲ್ ದೇವ್ ಸಾರಥ್ಯದ ಭಾರತವು ಚೊಚ್ಚಲ ವಿಶ್ವಕಪ್ ಗೆದ್ದಾಗಿನಿಂದ 2024 ರ ಟಿ20 ವಿಶ್ವಕಪ್ ಗೆಲುವಿನ ವರೆಗೂ ಈ ಸಂಪ್ರದಾಯ ಕಂಡುಬಂದಿದೆ.
ಈ ಐತಿಹಾಸಿಕ ಕ್ರೀಡಾಂಗಣ ಭಾರತೀಯ ಕ್ರಿಕೆಟಿಗೆ ಅದೆಷ್ಟೋ ಕೊಡುಗೆಗಳನ್ನು ನೀಡಿದೆ. 2011ರ ಏಕದಿನ ವಿಶ್ವಕಪ್, ಧೋನಿಯ ಗೆಲುವಿನ ಸಿಕ್ಸರ್, ಸಚಿನ್ ತೆಂಡೂಲ್ಕರ್ ಟೆಸ್ಟ್ ವಿದಾಯ ಇವುಗಳಲ್ಲಿ ಪ್ರಮುಖವಾದದ್ದು