ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಾಯುಮಾಲಿನ್ಯದ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು, ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಕಠಿಣ ಕ್ರಮಕ್ಕೆ ಮುಂದಾಗಿದೆ. ನಗರದ ಯಾವುದೇ ಭಾಗದಲ್ಲಿ ಸತತ ಮೂರು ದಿನಗಳ ಕಾಲ ವಾಯು ಗುಣಮಟ್ಟ ಸೂಚ್ಯಂಕ (AQI) 200ಕ್ಕಿಂತ ಹೆಚ್ಚಿದ್ದರೆ, ತಕ್ಷಣವೇ ‘GRAP-IV’ (Graded Response Action Plan – ಹಂತ 4) ಜಾರಿಗೊಳಿಸಲು ನಿರ್ಧರಿಸಿದೆ.
ಹೀಗಂದರೇನು? ಅದರ ಪರಿಣಾಮವೇನು?
ಜಿಆರ್‌ಎಪಿ-IV ಎನ್ನುವುದು ವಾಯುಮಾಲಿನ್ಯ ನಿಯಂತ್ರಣದ ಅತ್ಯಂತ ಕಠಿಣ ಹಂತವಾಗಿದೆ. ಇದು ಜಾರಿಯಾದರೆ: ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಎಲ್ಲಾ ರೀತಿಯ ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕಾಗುತ್ತದೆ. ಹೆಚ್ಚು ಹೊಗೆಯುಗುಳುವ ಕೈಗಾರಿಕೆಗಳ ಮೇಲೂ ನಿರ್ಬಂಧ ಹೇರಲಾಗುತ್ತದೆ.
ಪ್ರಸ್ತುತ ಸ್ಥಿತಿ ಹೇಗಿದೆ?
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿಅಂಶಗಳ ಪ್ರಕಾರ, ಸೋಮವಾರ (ಡಿ.1) ಬೆಳಿಗ್ಗೆ 10 ಗಂಟೆಗೆ ಮುಂಬೈನ ಸರಾಸರಿ ಎಕ್ಯೂಐ 111 ರಷ್ಟಿದ್ದು, ಸದ್ಯಕ್ಕೆ ‘ಮಧ್ಯಮ’ (Moderate) ವರ್ಗದಲ್ಲಿದೆ. ಭಾನುವಾರ ಇದು 104 ರಷ್ಟಿತ್ತು. ಆದರೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಂತಹ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಅಲ್ಪಾವಧಿಗೆ ‘ತೀವ್ರ’ (Severe) ಹಂತವನ್ನು ತಲುಪಿತ್ತು. ಮಜಗಾಂವ್ ಪ್ರದೇಶದಲ್ಲಿ ಇತ್ತೀಚೆಗೆ ಎರಡು ಬಾರಿ AQI 305 ಕ್ಕೆ ಏರಿಕೆ ಕಂಡಿತ್ತು.
ಬಿಎಂಸಿ ಆಯುಕ್ತರ ಕಳವಳ:
ಬಿಎಂಸಿ ಮುಖ್ಯಸ್ಥ ಭೂಷಣ್ ಗಗ್ರಾನಿ ಅವರು ಮಾತನಾಡಿ, “ನಗರದಲ್ಲಿ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಸ್ತೆಗಳು ಮತ್ತು ಫುಟ್‌ಪಾತ್‌ಗಳಿಗೆ ನೀರು ಸಿಂಪಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ,” ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಇನ್ನೂ ‘ಕಳಪೆ’ (Poor) ಮಟ್ಟದಲ್ಲೇ ಮುಂದುವರೆದಿದೆ. ಸದ್ಯಕ್ಕೆ ಅಲ್ಲಿ ಯಾವುದೇ ಹೊಸ ನಿರ್ಬಂಧಗಳನ್ನು ಘೋಷಿಸಿಲ್ಲ.
ಮುಂಬೈ ಮತ್ತು ಅದರ ಉಪನಗರಗಳಲ್ಲಿ ಮೆಟ್ರೋ, ರಸ್ತೆ, ಮೇಲ್ಸೇತುವೆ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಹಳೆಯ ಕಟ್ಟಡಗಳನ್ನು ಕೆಡವಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದೇ ಧೂಳು ಮತ್ತು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ; ತಮಿಳುನಾಡು, ಪುದುಚೇರಿಯಲ್ಲಿ ದಿತ್ವಾ ಸೈಕ್ಲೋನ್ ಅಬ್ಬರ | ಬೆಂಗಳೂರಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ತಾಪಮಾನ


















