ಬೆಂಗಳೂರು: ಭಾರತ ತಂಡದ ನಾಯಕಿ ಹಾಗೂ ಡಬ್ಲ್ಯುಪಿಎಲ್ನಲ್ಲಿ ಮುಂಬೈ ತಂಡದ ನಾಯಕಿಯಾಗಿರುವ ಹರ್ಮನ್ಪ್ರೀತ್ ಕೌರ್, ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿ. ಮೈದಾನದಲ್ಲಿ ಜಗಳವಾಡಿದ ಹಲವಾರು ಪ್ರಸಂಗಗಳು ಅವರನ್ನು ಪೇಚಿಗೆ ಸಿಲುಕಿಸಿದೆ ಹಾಗೂ ದಂಡಕ್ಕೆ ತುತ್ತಾಗುವಂತೆ ಮಾಡಿದೆ. ಅಂತೆಯೇ ಗುರುವಾರ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್‌ನ(WPL 2025) ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಅವರಿಗೆ ಬಿಸಿಸಿಐ ಪಂದ್ಯ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಿದೆ.
ಈ ಪಂದ್ಯದಲ್ಲಿ ಮುಂಬೈ 6 ವಿಕೆಟ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ ಸನಿಹಕ್ಕೆ ಬಂದು ನಿಂತಿದೆ. ಆದರೂ, ಹರ್ಮನ್ಪ್ರೀತ್ ತಮ್ಮ ಮುಂಗೋಪ ತೋರುವ ಮೂಲಕ ಕೆಟ್ಟ ಹೆಸರು ತಂದುಕೊಂಡಿದ್ದಾರೆ.
ಯುಪಿ ವಾರಿಯರ್ಸ್ ಇನಿಂಗ್ಸ್‌ನ 19ನೇ ಓವರ್‌ನ ಕೊನೆಯ ವೇಳೆ ಮುಂಬೈ ತಂಡದ ನಿಧಾನಗತಿಯ ಬೌಲಿಂಗ ನಡೆಸಿತ್ತು. ಹೀಗಾಗಿ ಅಂಪೈರ್ ಅಜಿತೇಶ್ ಅರ್ಗಲ್ ಅಂತಿಮ ಓವರ್‌ನಲ್ಲಿ ಕೇವಲ ಮೂವರು ಫೀಲ್ಡರ್‌ಗಳು ಮೈದಾನದಲ್ಲಿ ಇರಲು ಸಾಧ್ಯ ಎಂದು ಹರ್ಮನ್‌ಪ್ರೀತ್‌ಗೆ ತಿಳಿಸಿದರು. ಅತೃಪ್ತರಾದ ಹರ್ಮನ್‌ಪ್ರೀತ್ ಅಂಪೈರ್ ಜತೆ ಕೆಲಕಾಲ ವಾಗ್ವಾದ ನಡೆಸಿದರು. ಈ ವೇಳೆ ನಡುವೆ ಬಂದ ಯುಪಿ ವಾರಿಯರ್ಸ್ ತಂಡದ ಸೋಫಿ ಎಕ್ಲೆಸ್ಟೋನ್ ಅವರನ್ನೂ ನಿಂದಿಸಿದ್ದಾರೆ. ಇದೀಗ ಬಿಸಿಸಿಐ ಅವರಿಗೆ ದಂಡದ ಬಿಸಿ ಮುಟ್ಟಿಸಿದೆ.
‘ಹರ್ಮನ್‌ಪ್ರೀತ್ ಕೌರ್ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರಕ್ಕೆ ಅಗೌರವ ತೋರಿದ್ದಾರೆ. ಆರ್ಟಿಕಲ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಪಂದ್ಯ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ. ಕೌರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ’ ಎಂದು ಡಬ್ಲ್ಯುಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುಪಿ ತಂಡ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 9 ವಿಕೆಟಿಗೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭಿಕ ಆಟಗಾರ್ತಿ ಹೇಲೆ ಮ್ಯಾಥ್ಯೂಸ್ ಅವರ ಉತ್ತಮ ಆಟದಿಂದಾಗಿ ತಂಡ 18.3 ಓವರ್‌ಗಳಲ್ಲಿ 4 ವಿಕೆಟಿಗೆ 153 ರನ್ ಪೇರಿಸಿ ಸುಲಭ ಗೆಲುವು ದಾಖಲಿಸಿತು.
ಮ್ಯಾಥ್ಯೂಸ್ ದ್ವಿತೀಯ ವಿಕೆಟಿಗೆ ನಟ್ ಸ್ಕಿವರ್ ಬ್ರಂಟ್ ಅವರ ಜತೆಗೂಡಿ 92 ರನ್ ಪೇರಿಸಿದ್ದರು. ಮ್ಯಾಥ್ಯೂಸ್ 46 ಎಸೆತಗಳಿಂದ 68 ರನ್ ಗಳಿಸಿ ಔಟಾದರೆ ಬ್ರಂಟ್ 37 ರನ್ ಬಾರಿಸಿದರು.