ಬೆಂಗಳೂರು: ಪ್ರತಿ ತಿಂಗಳ 1ನೇ ತಾರೀಖಿನಂದು ಬದಲಾಗುವಂತೆ ನವೆಂಬರ್ 1ರಂದು ಕೂಡ ಹಲವು ಬ್ಯಾಂಕಿಂಗ್, ಎಲ್ ಪಿ ಜಿ ಸಿಲಿಂಡರ್ ಸೇರಿ ಹಲವು ಹಣಕಾಸು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ಹಾಗಾದರೆ, ನವೆಂಬರ್ 1ರಿಂದ ಯಾವೆಲ್ಲ ಹಣಕಾಸು ನಿಯಮಗಳು ಬದಲಾಗುತ್ತಿವೆ? ಗ್ರಾಹಕರಿಗೆ ಯಾವುದು ಹೊರೆಯಾಗಲಿದೆ ಎಂಬುದನ್ನು ತಿಳಿಯೋಣ ಬನ್ನಿ.
ಬ್ಯಾಂಕ್ ಖಾತೆಗೆ ನಾಲ್ವರು ನಾಮಿನಿಗಳು
ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯ್ದೆ-2025ಅನ್ನು ಜಾರಿಗೆ ತರುತ್ತಿದೆ. ನವೆಂಬರ್ 1ರಿಂದ ನೂತನ ಕಾಯ್ದೆ ಜಾರಿಗೆ ಬರಲಿದೆ. ಅದರಂತೆ, ದೇಶದ ನಾಗರಿಕರು ಯಾವುದೇ ಬ್ಯಾಂಕ್ ಖಾತೆಗೆ ಗರಿಷ್ಠ 4 ಮಂದಿಯನ್ನು ನಾಮನಿರ್ದೇಶನ ಮಾಡುವ ಹೊಸ ನಿಯಮವು ನವೆಂಬರ್ 1ರಿಂದ ಜಾರಿಗೆ ಬರಲಿದೆ. ಹೊಸ ನಿಯಮಗಳ ಪ್ರಕಾರ, ಬ್ಯಾಂಕ್ ಖಾತೆಗೆ ಇನ್ನುಮುಂದೆ ನಾಲ್ವರನ್ನು ನಾಮಿನಿಗಳನ್ನಾಗಿ ಸೇರಿಸಬಹುದಾಗಿದೆ. ಇದರಿಂದಾಗಿ, ಖಾತೆದಾರರ ಹಣವನ್ನು ಬೇರೆಯವರು ಕ್ಲೇಮ್ ಮಾಡಲು, ಯಾರಿಗೆ ಎಷ್ಟು ಹಣ ಸೇರಬೇಕು ಎಂಬುದನ್ನು ಖಾತೆದಾರರು ಮೊದಲೇ ತೀರ್ಮಾನಿಸಲು ಸಾಧ್ಯವಾಗಲಿದೆ.
ಆಧಾರ್ ಅಪ್ ಡೇಟ್ ನಿಯಮ ಸರಳ
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಆಧಾರ್ ಕೇಂದ್ರಕ್ಕೆ ಹೋಗದೆ, ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಆನ್ ಲೈನ್ ಮೂಲಕ ಎಲ್ಲಿಂದ ಬೇಕಾದರೂ ಅಪ್ ಡೇಟ್ ಮಾಡಬಹುದು. ಹೊಸ ನಿಯಮಗಳ ಜಾರಿಯಿಂದಾಗಿ ಬಯೋಮೆಟ್ರಿಕ್ ವಿವರಗಳಿಗಾಗಿ ಮಾತ್ರ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ.
ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಕೆಗೆ ಹೆಚ್ಚಿನ ಶುಲ್ಕ
ಭಾರತೀಯ ಸ್ಟೇಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಥರ್ಡ್ ಪಾರ್ಟಿ ಆ್ಯಪ್ ಗಳ ಮೂಲಕ ಹಣ ಪಾವತಿಸುವವರಿಗೆ, ಕ್ರೆಡಿಟ್ ಕಾರ್ಡ್ ಮೂಲಕ ಥರ್ಡ್ ಪಾರ್ಟಿ ಪೇಮೆಂಟ್ ಆ್ಯಪ್ ನ ವ್ಯಾಲೆಟ್ ಗಳಿಗೆ ದುಡ್ಡು ಹಾಕಿಕೊಳ್ಳುವವರಿಗೆ ನವೆಂಬರ್ 1ರಿಂದ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ನೀವು ಫೋನ್ ಪೇ, ಅಮೆಜಾನ್ ಪೇ, ಮೊಬಿಕ್ವಿಕ್ ಅಥವಾ ಪೇಟಿಎಂ ಬಳಸುತ್ತಿದ್ದು, ಯಾವುದಕ್ಕಾದರೂ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್ ಮೂಲಕ ವ್ಯಾಲೆಟ್ ಗೆ 1 ಸಾವಿರ ರೂಪಾಯಿ ಜಮೆ ಮಾಡಿದರೆ, ಅದಕ್ಕೆ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗೇನಾದರೂ, ಶಿಕ್ಷಣಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಥರ್ಡ್ ಪಾರ್ಟಿ ಆ್ಯಪ್ ಗಳ ಮೂಲಕ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದರೆ, ನಿಮಗೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ.
ಎಲ್ ಪಿ ಜಿ ಬೆಲೆ ಏರಿಕೆ ಅಥವಾ ಇಳಿಕೆ
ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿ ಜಿ ಬೆಲೆಯನ್ನು ಏರಿಕೆ ಮಾಡುತ್ತವೆ ಇಲ್ಲವೇ ಇಳಿಕೆ ಮಾಡುತ್ತವೆ. ಅದರಂತೆ, ನವೆಂಬರ್ 1ರಂದು ಕೂಡ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲಿ ವ್ಯತ್ಯಾಸವಾಗಬಹುದು. ಕಳೆದ ತಿಂಗಳು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು.
ಇದನ್ನೂ ಓದಿ: ಎಫ್ ಡಿ ಹೂಡಿಕೆಗೆ ಶೇ.8ರವರೆಗೆ ಬಡ್ಡಿ: ಟಾಪ್ 10 ಬ್ಯಾಂಕುಗಳ ಬಡ್ಡಿದರದ ಮಾಹಿತಿ ಇಲ್ಲಿದೆ



















