ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರಿಗೆ ಮುಹೂರ್ತ ಫಿಕ್ಸ್ ಆಗಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜೀನಾಮೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅದು ಬಿಜೆಪಿಗರಿಗೆ ಮಾತ್ರ ಸೀಮಿತ. ಆ ಪಕ್ಷದಲ್ಲೇ ಈಗ ಗುಂಪುಗಳಾಗಿವೆ. ಮೊದಲಿಗೆ ಆ ಜಗಳವನ್ನು ನಿಲ್ಲಿಸಲಿ. ಒಂದು ಕಡೆ ಯತ್ನಾಳ್, ರಮೇಶ್ ಜಾರಕಿಹೊಳಿ. ಇನ್ನೊಂದು ಕಡೆ ವಿಜಯೇಂದ್ರ ಇದ್ದು. ಪ್ರತಿ ದಿನ ಪೈಟ್ ಮಾಡುತ್ತಾರೆ. ಮೊದಲು ಅವರು ಒಗ್ಗಟ್ಟಾಗಲಿ. ಆ ಮೇಲೆ ನಮ್ಮನ್ನು ಪ್ರಶ್ನೆ ಮಾಡಲಿ ಎಂದು ಗುಡುಗಿದ್ದಾರೆ.
ನಮ್ಮಲ್ಲಿ ಅಧಿಕಾರಕ್ಕಾಗಿ ಯಾವುದೇ ಜಗಳ ನಡೆಯುತ್ತಿಲ್ಲ. ಒಪ್ಪಂದದ ಕುರಿತು ಸಿಎಂ ಹೇಳಿಕೆಯೇ ಅಂತಿಮ ಎಂದು ಈಗಾಗಲೇ ಡಿಸಿಎಂ ಹೇಳಿದ್ದಾರೆ. ಹಾಗಿದ್ದರೂ ಈ ಕುರಿತು ಚರ್ಚಿಸುವುದು ಸರಿಯಲ್ಲ. ಸುಮ್ಮನೆ ಬಿಜೆಪಿಯವರು ಇಲ್ಲ ಸಲ್ಲದ್ದನ್ನು ಹುಟ್ಟು ಹಾಕುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಬಿಜೆಪಿಯವರು ಕ್ಷುಲ್ಲಕ ರಾಜಕಾರಣ ಮಾಡುವುದು ಬಿಡಬೇಕು. ಉತ್ತರ ಕರ್ನಾಟಕದ ಸಮಸ್ಯೆ ಇದೆ. ಆ ಸಮಸ್ಯೆ ಪರಿಹಾರಕ್ಕಾಗಿ ಅವರು ಸಲಹೆ ನೀಡಲಿ. ಅವುಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.