ಬೆಂಗಳೂರು: ಬಸವೇಶ್ವರ ನಗರದಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಎಸ್ ಎನ್ ಟಿ ಎಂಟರ್ಪ್ರೈಸ್ ಲಾಂಛನದಲ್ಲಿ ಎಸ್ ಸಿ ರವಿ ಭದ್ರಾವತಿ ನಿರ್ಮಿಸುತ್ತಿರುವ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು.
ಗೀತಸಾಹಿತಿ ಅರಸು ಅಂತಾರೆ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕ ರವಿ ಅವರ ಸಹೋದರಿಯರು “ಪ್ರೊಡಕ್ಷನ್ ನಂ 1” ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ಮಾಪಕ ಉದಯ್ ಕೆ ಮೆಹ್ತಾ ಸೇರಿದಂತೆ ಸಾಕಷ್ಟು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಲವ್ ಇನ್ ಮಂಡ್ಯ” ಚಿತ್ರದ ನಂತರ ಒಂದು ದಶಕದ ಬಳಿಕ ಮತ್ತೆ ನಿರ್ದೇಶನ ಮಾಡುತ್ತಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ಅರಸು ಅಂತಾರೆ, ಸಿನಿಮಾವನ್ನು ಅಂದುಕೊಂಡ ಹಾಗೆ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಹೀಗಾಗಿ ಎರಡನೇ ಚಿತ್ರವನ್ನು ನಿರ್ದೇಶಿಸಲು ಇಷ್ಟು ಸಮಯವಾಯಿತು. ಈ ಚಿತ್ರದ ಕಥೆ ವಿಭಿನ್ನವಾಗಿದೆ. ಗಣೇಶ್ ಅವರು ಇಲ್ಲಿಯವರೆಗೂ ಮಾಡಿರದ ಪಾತ್ರ ಹಾಗೂ ಕಥೆ ಅಂತ ಹೇಳಬಹುದು. ರಾಮನವಮಿ ಶುಭದಿನ ಚಿತ್ರಕ್ಕೆ ಚಾಲನೆ ದೊರಕಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣ ಮಾಡುತ್ತೇವೆ. ಗಣೇಶ್ ಅವರಿಗೆ ನಾಯಕಿಯಾಗಿ ಕನ್ನಡದವರೆ ಆದ “ಹನುಮಾನ್” ಖ್ಯಾತಿಯ ಅಮೃತ ಅಯ್ಯರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ರವಿ ಭದ್ರಾವತಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅರಸು ಅಂತಾರೆ ಯವರ ಚಿತ್ರಕಥೆಗೆ ಮಹೇಶ್ ದೇವ್ ಡಿ.ಎನ್. ಪುರ ಹಾಗೂ ಸಂಭಾಷಣೆಗೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಾಥ್ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ ಹಾಗೂ ವಿಜಯ್ ರಾಕೇಶ್ ಕಶ್ಯಪ್ ಮತ್ತು ಕೀರ್ತಿ ಕೃಷ್ಣಪ್ಪ ಅವರ ಸಹ ನಿರ್ದೇಶನವಿರುವ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ ಎಂದರು.

ಅರಸು ಅಂತಾರೆ ಅವರು ನನಗೆ 2019 ರಲ್ಲಿ ಕಥೆ ಹೇಳಲು ಭೇಟಿ ಮಾಡಿದ್ದರು. ಆನಂತರ ಕೋವಿಡ್ ಕಾರಣದಿಂದ ಆಗ ಕಥೆ ಕೇಳಲು ಆಗಿರಲಿಲ್ಲ. ಇತ್ತೀಚೆಗೆ ಅರಸು ಅವರು ಈ ಚಿತ್ರದ ಕಥೆ ಹೇಳಿದಾಗ ಕೇಳಿ ಬಹಳ ಇಷ್ಟವಾಯಿತು. ಮೂಲತಃ ಅವರು ಒಬ್ಬ ಬರಹಗಾರನಾಗಿರುವುದರಿಂದ ಕಥೆಯನ್ನು ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ. ಜನರಿಗೂ ಈ ಕಥೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಅರಸು ಅವರು ಹೇಳಿದ ಹಾಗೆ ಈ ಚಿತ್ರದಲ್ಲಿ ನಾನು ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬಹಳ ದಿನಗಳಿಂದ ಪರಿಚಯವಿರುವ ಭದ್ರಾವತಿ ರವಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅಮೃತ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ರವಿಶಂಕರ್, ಕಾಕ್ರೋಜ್ ಸುಧೀ ಅವರೊಂದಿಗೆ ನಟಿಸುತ್ತಿರುವುದು ಖುಷಿಯಾಗಿದೆ. ಕನ್ನಡದಲ್ಲಿ ತುಂಬಾ ಒಳ್ಳೆಯ ಬರಹಗಾರರಿದ್ದಾರೆ. ಅವರೆಲ್ಲಾ ಸಿನಿಮಾ ಮಾಡಲು ಮುಂದೆ ಬರಬೇಕು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಖಂಡಿತ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದರು ನಾಯಕ ಗಣೇಶ್.

ನಾನು ಕನ್ನಡದ ಹುಡುಗಿ. ಕನ್ನಡದಲ್ಲಿ ಇದು ಮೊದಲ ಚಿತ್ರ. ನಿರ್ದೇಶಕರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಗಣೇಶ್ ಅವರೊಂದಿಗೆ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು “ಹನುಮಾನ್” ಖ್ಯಾತಿಯ ನಟಿ ಅಮೃತ ಅಯ್ಯರ್ ತಿಳಿಸಿದರು.

ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎಸ್ ಸಿ ರವಿ ಭದ್ರಾವತಿ. ಹಿರಿಯ ನಟ ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಛಾಯಾಗ್ರಾಹಕ ಸುಜ್ಞಾನ್ ಮತ್ತು ಸಂಕಲನಕಾರ ಅಕ್ಷಯ್ ಪಿ ರಾವ್, ಸಚಿನ್ ಮುಂತಾದವರು ನೂತನ ಚಿತ್ರದ ಕುರಿತು ಮಾತನಾಡಿದರು. ಪ್ರಸ್ತುತ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ.