ಧಾರವಾಡ : ಸರ್ವ ಸಮಾಜಗಳ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುವ ತಾಲೂಕಿನ ಅಮ್ಮಿನಬಾವಿ ಗ್ರಾಮದ ಮೊಹರಂ ಹಬ್ಬದಾಚರಣೆ ಹಿಂದೂ-ಮುಸ್ಲೀಂ ಭಾವೈಕ್ಯದ ಹಬ್ಬವಾಗಿ ಗಮನಸೆಳೆದಿದೆ. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲದಿಂದ ವಿಶೇಷವಾಗಿ ನಡೆದುಕೊಂಡು ಬಂದಿರುವ ಅಮ್ಮಿನಬಾವಿ ಮೊಹರಂ ಆಚರಣೆಗೆ ತನ್ನದೇ ಆದ ವಿಶೇಷತೆ ಇದೆ.
ದೇಸಾಯರ ಕೊಡುಗೆ : ಅಮ್ಮಿನಬಾವಿ ಗ್ರಾಮದ ಮಸೀದಿಯಲ್ಲಿ ಬೆಳ್ಳಿಯ ಎರಡು ದೊಡ್ಡ ಗಾತ್ರದ ಪಂಜಾಗಳನ್ನು ಸ್ಥಾಪನೆ ಮಾಡಿದ್ದು, ಒಂದನ್ನು ‘ಗುತ್ತೇಸಾಬ್’ ಎಂದೂ, ಮತ್ತೊಂದನ್ನು ‘ಕಾಸೀಂದುಲೈಃ’ ಎಂದು ಸಂಬೋಧಿಸಲಾಗುತ್ತಿದೆ. ವಿಶೇಷವೆಂದರೆ ಅಮ್ಮಿನಬಾವಿ ಗ್ರಾಮದ ದಿಗಂಬರ ಜೈನ್ ಸಮಾಜದ ಮುಖಂಡರಾಗಿದ್ದ ದಿವಂಗತ ರಾವಬಹದ್ದೂರ ಪಂಪಾಪತಿ ದೇಸಾಯಿ ಗುತ್ತೇಸಾಬ್ ಪಂಜಾವನ್ನು ಬೆಳ್ಳಿಯಿಂದ ಬಹಳ ಸುಂದರವಾಗಿ ಮಾಡಿಸಿಕೊಟ್ಟಿದ್ದು, ಇದು ಅಮ್ಮಿನಬಾವಿ ಗ್ರಾಮದ ಭಾವೈಕ್ಯತೆಗೆ ಸಾಕ್ಷಿ ನುಡಿಯುತ್ತದೆ.
ಮೊಹರಂ ಕೊನೆಯ ದಿನದ ಆಚರಣೆ ರವಿವಾರ ನಡೆಯಲಿದ್ದು, ಉಭಯ ಪಂಜಾಗಳನ್ನು ಹೊತ್ತುಕೊಂಡು ಪ್ರಾತಃಕಾಲದಲ್ಲಿ ಅಗ್ನಿಹಾಯುವ ಪ್ರಕ್ರಿಯೆ ಬಹಳ ಹಿಂದಿನಿಂದಲೂ ನಡೆಯುತ್ತ ಬಂದಿದೆ. ನಂತರ ಡೋಲಿ ಸಮೇತ ಉಭಯ ಪಂಜಾಗಳು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸುತ್ತವೆ. ಸಂಜೆ ಮತ್ತೆ ಈ ಪಂಜಾಗಳ ಮೆರವಣಿಗೆ ನಡೆಯುತ್ತಿದ್ದು, ಹೊಳೆಗೆ ಹೋಗುವ ಕಾರ್ಯಕ್ರಮದಲ್ಲಿ ಹತ್ತಿರದ ಮರೇವಾಡ ಹಾಗೂ ತಿಮ್ಮಾಪೂರ ಗ್ರಾಮಗಳ ಪಂಜಾಗಳೂ ಸಹ ಸಮಾವೇಶಗೊಳ್ಳುತ್ತವೆ.
ಹೆಜ್ಜೆ ಮೇಳಗಳ ಸಂಭ್ರಮ : ಪ್ರತೀ ವರ್ಷವೂ ಗ್ರಾಮದ ಹಿಂದೂ-ಮುಸ್ಲೀಂ ಸೇರಿದಂತೆ ಬಹುಪಾಲು ಸಮಾಜಗಳ ರೈತರು ಹೆಜ್ಜೆ ಮೇಳಗಳನ್ನು ಸಂಘಟಿಸಿ ಉಭಯ ಪಾಂಜಾಗಳ ಮೆರವಣಿಗೆಗೆ ರಂಗು ತುಂಬುತ್ತಾರೆ. ಮೊಹರಂ ಹಿಂದಿನ ದಿನ ರಾತ್ರಿ ರೈತರು ಚೊಂಗೆ ಸಹಿ ಖಾದ್ಯವನ್ನು ಎಡೆ ಕೊಡುವ ಪದ್ಧತಿಯೂ ಇದೆ.