ಬಾಗಲಕೋಟೆ: ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿ ದಡದ ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ.
ಮುಧೋಳ ತಾಲೂಕಿನ ಘಟಪ್ರಭಾ ನದಿ ದಡದ ಅಂತಾಪುರ ಕಿರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಬಂದ್ ಆಗಿದೆ. ಕಿರು ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದು ಅಂತಾಪುರದಿಂದ ನದಿ ಆಚೆಗಿನ ಬೇರೆ ಗ್ರಾಮಗಳಿಗೆ ಓಡಾಡಲು ಜನರಿಗೆ ಸಮಸ್ಯೆಯಾಗಿದೆ.
ನದಿ ದಡದ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಬೆಳೆಗಳು ನೀರಿಗೆ ಆಹುತಿಯಾಗುತ್ತಿವೆ. ಒಟ್ಟು ಘಟಪ್ರಭಾ ನದಿದಡದ 11 ಕಿರು ಸೇತುವೆಗಳು ಮುಳುಗಡೆಯಾಗಿವೆ. ಆದ್ದರಿಂದ ಆ ಭಾಗದ ಜನರಿಗೆ ಪ್ರವಾಹದ ಆತಂಕ ಮನೆ ಮಾಡಿದೆ.