ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಶುರುವಾಗಿದೆ. ಅಧಿಕಾರದಲ್ಲಿದ್ದವರು ತಮ್ಮ ಪ್ರಭಾವ ಬೆಳೆಸಿ ಸಿಕ್ಕ ಸಿಕ್ಕಲ್ಲಿ ಬೇನಾಮಿ ಆಸ್ತಿ ಮಾಡಿರುತ್ತಾರೆ ಎಂಬ ಆರೋಪ ಕೇಳಿ ಬಂದಿರುತ್ತವೆ. ಈ ಮಧ್ಯೆ ಸಿಎಂ ಮೇಲೆಯೂ ಈ ಆರೋಪ ಕೇಳಿ ಬಂದಿದ್ದು, ನಿಜವಾಗಿಯೂ ಅವರ ಆಸ್ತಿ ಎಷ್ಟು? ಅವರು ಹಾಗೂ ಕುಟುಂಬದ ಹೆಸರಿನಲ್ಲಿ ಇರುವ ಜಾಗ ಎಷ್ಟು? ಎಂಬ ಕುತೂಹಲ ಈಗ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದೆ.
2023ರ ವಿಧಾನಸಭೆ ಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅವರೇ ಘೋಷಿಸಿದಂತೆ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರು ಸುಮಾರು 49.83 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವಿಭಜಿತ ಕುಟುಂಬದ ಆಸ್ತಿಯೂ ಸೇರಿದರೆ ಈ ಪ್ರಮಾಣ 50.64 ಕೋಟಿ ರೂ. ತಲುಪುತ್ತದೆ. ಇದರೊಂದಿಗೆ ಅಲ್ಲದೆ ದಂಪತಿ 23.08 ಕೋಟಿ ರೂ. ಸಾಲ ಹೊಂದಿದ್ದಾರೆ.
ಸಿದ್ದರಾಮಯ್ಯ ಅವರಿಗಿಂತಲೂ ಪತ್ನಿ ಪಾರ್ವತಿ ಶ್ರೀಮಂತರು. ಸಿದ್ದರಾಮಯ್ಯ ಅವರ ಒಟ್ಟು ಚರಾಸ್ಥಿ 9.58 ಕೋಟಿ ರೂ. ಆಗಿದೆ. ಅಲ್ಲದೇ, ಪತ್ನಿಗೆ 6.16 ಕೋಟಿ ರೂ. ಸಾಲ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯಗೆ 1.83 ಕೋಟಿ ರೂ. ಸಾಲ ನೀಡಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಅವರು 21.86 ಲಕ್ಷ ರೂ. ಠೇವಣಿ ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಅವಿಭಜಿತ ಕುಟುಂಬಕ್ಕೆ ಸಂಬಂಧಿಸಿದ 32 ಲಕ್ಷ ರೂ. ಮೌಲ್ಯದ ಮನೆ ಇದೆ. ಬಸವೇಶ್ವರ ನಗರದ ವೆಸ್ಟ್ ಕಾರ್ಡ್ ರಸ್ತೆಯಲ್ಲಿ 10,000 ಚದರ ಅಡಿಯ ವಾಣಿಜ್ಯ ಕಟ್ಟಡವೂ ಇದೆ. 2004ರಲ್ಲಿ 39.59 ಲಕ್ಷ ರೂ.ಗೆ ಇದನ್ನು ಖರೀದಿಸಿದ್ದರು. ಸದ್ಯದ ಇದರ ಮೌಲ್ಯ 7.33 ಕೋಟಿ ರೂ. ಆಗಿದೆ.
ಪತ್ನಿ ಪಾರ್ವತಿ ಅವರು 11.26 ಕೋಟಿ ರೂ. ಮೌಲ್ಯದ ಚರಾಸ್ಥಿ ಹೊಂದಿದ್ದಾರೆ. ಸದಾಶಿವ ನಗರದ ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ 4.70 ಕೋಟಿ ರೂ. ನಿಶ್ಚಿತ ಠೇವಣಿ, ಐಸಿಐಸಿಐ ಬ್ಯಾಂಕ್ ಸೇರಿದಂತೆ ಮತ್ತೊಂದು ಬ್ಯಾಂಕ್ ನಲ್ಲಿ ತಲಾ 1.04 ಕೋಟಿ ರೂ. ಮೊತ್ತದ ಎರಡು ನಿಶ್ಚಿತ ಠೇವಣಿಗಳನ್ನು ಹೊಂದಿದ್ದಾರೆ. ಪತ್ನಿ ಪಾರ್ವತಿ ಅವರು ಒಟ್ಟು 6.92 ಕೋಟಿ ರೂ. ನಿಶ್ಚಿತ ಠೇವಣಿ ಹೊಂದಿದ್ದಾರೆ. ಅಲ್ಲದೇ, ಒಟ್ಟು 2.42 ಕೋಟಿ ರೂ. ಹೂಡಿಕೆ, 1.22 ಕೋಟಿ ರೂ. ಸಾಲವನ್ನೂ ಪಾರ್ವತಿ ನೀಡಿದ್ದಾರೆ.
ಸಿದ್ದರಾಮಯ್ಯ 9.43 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದರೆ, ಅವರ ಪತ್ನಿ 19.56 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಜಂಟಿ ಮಾಲಿಕತ್ವದಲ್ಲಿ ಬೆಂಗಳೂರಿನ ವಿಜಯನಗರ ಎಂಸಿ ಲೇಔಟ್ ನಲ್ಲಿ ಮನೆ ಹೊಂದಿದ್ದಾರೆ. 9,000 ಚದರ ಅಡಿಯ ನಿವಾಸವನ್ನು 2004ರಲ್ಲಿ 32.88 ಲಕ್ಷ ರೂ.ಗೆ ಖರೀದಿ ಮಾಡಿದ್ದರು. ಇದರ ಈಗಿನ ಮೌಲ್ಯ 4.21 ಕೋಟಿ ರೂ. ಆಗಿದೆ. ಇನ್ನು ಮಲ್ಲೇಶ್ವರಂನಲ್ಲಿ ಪಾರ್ವತಿ ಅವರು ಫ್ಲಾಟ್ ಹೊಂದಿದ್ದು, ಇದನ್ನು 2006ರಲ್ಲಿ ಖರೀದಿಸಿದ್ದಾರೆ. ಅದರ ಸದ್ಯದ ಮೌಲ್ಯ 1.67 ಕೋಟಿ ರೂ. ಆಗಿದೆ. ಸಿಎಂ ಅವರ ಪತ್ನಿ ಮೈಸೂರಿನ ವಿಜಯ ನಗರದಲ್ಲಿ 14 ಮುಡಾ ಸೈಟ್ ಹೊಂದಿದ್ದಾರೆ. ಮುಡಾದಿಂದ ಸ್ವಾಧೀನಕ್ಕೊಳಗಾದ ತಮ್ಮ ಜಮೀನಿಗೆ ಪರಿಹಾರವಾಗಿ ಇದನ್ನು ಪಡೆಯಲಾಗಿದೆ. 37,190.90 ಚದರ ಅಡಿಯ ಈ ಸೈಟ್ ಗಳ ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ. ಎಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಮೈಸೂರಿನ ವರುಣಾದಲ್ಲಿ 1 ಎಕರೆ 8 ಗುಂಟೆ ಜಮೀನು ಹೊಂದಿದ್ದಾರೆ. ಇದು ಸಿದ್ದರಾಮಯ್ಯ ಅವರಿಂದ ಬಳುವಳಿಯಾಗಿ ಬಂದಿರುವ ಜಮೀನು ಎನ್ನಲಾಗಿದೆ. ಹೀಗೆ ಸಿಎಂ ದಂಪತಿ 2 ಕೃಷಿ ಜಮೀನು, 14 ಮುಡಾ ಸೈಟು, ಒಂದು ವಾಣಿಜ್ಯ ಸಂಕೀರ್ಣ, 2 ಮನೆ, 1 ಫ್ಲ್ಯಾಟ್ ಸೇರಿ ಒಟ್ಟು 20 ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ.
ಅಲ್ಲದೇ, ಇಬ್ಬರೂ ಸಾಲವನ್ನೂ ಹೊಂದಿದ್ದಾರೆ. 50 ಕೋಟಿ ರೂ. ಆಸ್ತಿ ಒಡೆಯರಾಗಿದ್ದರೂ ಸಿಎಂ ದಂಪತಿ 23 ಕೋಟಿ ರೂ. ಸಾಲಗಾರರಾಗಿದ್ದಾರೆ. ಸಿದ್ದರಾಮಯ್ಯ ಅವರು 6.84 ಕೋಟಿ ಸಾಲ ಹೊಂದಿದ್ದರೆ, ಪಾರ್ವತಿ ಅವರು 16.24 ಕೋಟಿ ಸಾಲ ಹೊಂದಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಆಸ್ತಿ ಆಗಿದ್ದು, ಸದ್ಯ ಮುಡಾದ 14 ಸೈಟ್ ಗಳ ವಿಚಾರವಾಗಿ ರಾಜಕೀಯ ಗುದ್ದಾಟಕ್ಕೆ ಸಿಲುಕಿಕೊಂಡಿದ್ದಾರೆ.