ಬೆಂಗಳೂರು: ಮುಡಾ ಪ್ರಕರಣದ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ (Inquiry Commission) ರಚಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ನಿವೃತ್ತ ನ್ಯಾಯಾಧೀಶರಾದ ಪಿ.ಎನ್ ದೇಸಾಯಿ (PN Desai) ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶಿಸಿದೆ. ಪೂರ್ಣಾ ತನಿಖಾ ವರದಿಯನ್ನು 6 ತಿಂಗಳೊಳಗೆ ಸಲ್ಲಿಸುವಂತೆ ವಿಚಾರಣಾ ಆಯೋಗಕ್ಕೆ ಸರ್ಕಾರ (Karnataka Govt) ಸೂಚಿಸಿದೆ.
ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission Of Inquiry Act, 1952ರ (ವಿಚಾರಣಾ ಆಯೋಗ ಕಾಯ್ದೆ 1952) ನಿಮಯು 3ರ ಉಪನಿಯಮ (1) ಅನ್ವಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ / ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸಬೇಕು ಎಂದು ಸೂಚಿಸಲಾಗಿದೆ.