ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಮುಡಾ ಅಸ್ತ್ರ ಬಳಕೆ ಮಾಡುತ್ತಿದ್ದು, ಸದ್ಯ ರಾಜೀನಾಮೆಗಾಗಿ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.
ಇಂದು ಕೂಡ ಜೆಡಿಎಸ್-ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬೀದಿಗೆ ಇಳಿದಿದ್ದಾರೆ. ರಾಜಧಾನಿಯಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅಲ್ಲದೇ, ಸಿಎಂ ವಿರುದ್ಧ ಎಫ್ ಐಆರ್ ದಾಖಲಿಸಿ ಎಂದು ಮೈಸೂರು ಲೋಕಾಯುಕ್ತ ಎಸ್ಪಿಗೆ ಜೆಡಿಎಸ್ ನಿಯೋಗ ದೂರು ನೀಡಿದೆ. ಮುಡಾ ಪ್ರಕರಣದಲ್ಲಿ ಸಿಎಂಗೆ ಮೊದಲ ಸೋಲಾಗಿದೆ. ಹೀಗಾಗಿ ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಶನ್ ತೀರ್ಪು ಹಿನ್ನೆಲೆಯಲ್ಲಿ ಅಹಿಂದಾ ಮುಖಂಡರು ಹುಬ್ಬಳ್ಳಿಯಲ್ಲಿ ತುರ್ತು ಸಭೆ ಕರೆದಿದ್ದಾರೆ. ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ಹುಬ್ಬಳ್ಳಿಯ ಸರ್ಕಿಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ನೂರಾರು ಮುಖಂಡರು ಭಾಗಿಯಾಗಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಪರ ಮಂಡ್ಯದಲ್ಲಿ ಶೋಷಿತ ಸಮುದಾಯಗಳ ಒಕ್ಕೂಟ ಮೌನ ಪ್ರತಿಭಟನೆ ನಡೆಸಿತು. ಇದು ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ಎಂದು ಒಕ್ಕೂಟ ಆರೋಪಿಸಿದೆ.