ಮಂಗಳೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಆರ್ ಟಿಐ ಕಾರ್ಯಕರ್ತ ಗಂಗರಾಜು ಫೋಟೋಗಳನ್ನು ಶಕ್ತಿ ದೇವತೆಯ ಮುಂದೆ ಇಟ್ಟು ವಾಮಾಚಾರ ಮಾಡಿರುವ ವಿಡಿಯೋ ಹಾಗೂ ಫೋಟೋಗಳು ಪೊಲೀಸರಿಗೆ ಸಿಕ್ಕಿವೆ.
ಮಸಾಜ್ ಪರ್ಲಾರ್ ಗಲಾಟೆಯಲ್ಲಿ ಅರೆಸ್ಟ್ ಆಗಿರುವ ಶ್ರೀರಾಮ ಸೇನೆ (Sriram Sena) ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು (Gangaraju) ಫೋಟೋಗೆ ಹಚ್ಚಲಾಗಿದೆ.
ಅಲ್ಲದೇ, ಸರಣಿ ಪ್ರಾಣಿ ಬಲಿ ನಡೆದಿದೆ ಎನ್ನಲಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಶಕ್ತಿ ತುಂಬಲು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಈಗ ಕದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.