ಮೈಸೂರು: ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮುಡಾ ಪ್ರಕರಣದ ತನಿಖೆಯನ್ನು ಈಗಾಗಲೇ ಲೋಕಾಯುಕ್ತ ಮುಗಿಸಿದ್ದು, ನಾಳೆ(ಜ. 27) ಹೈಕೋರ್ಟ್ ಗೆ ವರದಿ ಸಲ್ಲಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲಿದ್ದಾರೆ. ಪ್ರಕರಣದ ಕುರಿತು ಕೋರ್ಟ್ ಸೂಚನೆಯಂತೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಬಿಎಂ ಪಾರ್ವತಿ ಎರಡನೇ, ಭಾವಮೈದುನ ಬಿಎಂ ಮಲ್ಲಿಕಾರ್ಜುನ ಸ್ವಾಮಿ ಮೂರನೇ ಹಾಗೂ ಜಮೀನಿನ ಮಾಲೀಕ ಜೆ.ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದ ತಂಡ ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿತ್ತು.
ಮುಡಾ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿರುವ ಅರ್ಜಿ ವಿಚಾರಣೆ ಕೂಡ ಹೈಕೋರ್ಟ್ ನಲ್ಲಿ ಸೋಮವಾರ ನಡೆಯಲಿದೆ. ಇನ್ನೊಂದೆಡೆ ಮುಡಾ ನಿವೇಶನ ಹಂಚಿಕೆಯ ಅಕ್ರಮ ಆರೋಪದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ಆದೇಶ ಎತ್ತಿಹಿಡಿದಿದ್ದ ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 22ಕ್ಕೆ ಮುಂದೂಡಿದೆ.